ಪಣಜಿ, ಜ.11- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕ್ರಿಶ್ಚಿಯನ್ ಸಮುದಾಯದ ಶಾಸಕರು ಬಿಜೆಪಿ ತೊರೆಯುತ್ತಿರುವುದು ಕೇಸರಿ ಪಡೆಗೆ ತಲೆ ನೋವಾಗಿ ಪರಿಣಮಿಸಿದೆ. ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಮತ್ತೆ ಮರಳಿ ಅಧಿಕಾರ ಹಿಡಿಯುವ ಕೆಚ್ಚೆದೆ ಪ್ರದರ್ಶನ ಮಾಡುತ್ತಿದೆ. ಆದರೂ ಒಬ್ಬರಾದ ಮೇಲೆ ಒಬ್ಬರಂತೆ ಕ್ರಿಶ್ಚಿಯನ್ ಸಮುದಾಯದ ಶಾಸಕರು ಬಿಜೆಪಿ ತೊರೆಯುತ್ತಿರುವುದು ಮಂಕು ಕವಿದಂತೆ ಮಾಡಿದೆ.
ಕಲಾಂಗುಟೆ ಕ್ಷೇತ್ರದ ಶಾಸಕ ಹಾಗೂ ಸಚಿವ ಮೈಕೆಲ್ ಲೋಬೋ ಅವರು ಸೋಮವಾರ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ ಪತ್ನಿ ದಲಿಲಾ ಅವರಿಗೆ ಸಿಯೋಲಿಮ್ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದ ಲೋಬೋ ಅವರು, ಅವಕಾಶ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಪಕ್ಷ ತೊರೆದಿದ್ದಾರೆ ಎಂಬ ಆರೋಪಗಳಿವೆ.
ಗೋವಾ ಉತ್ತರ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದ ಅವರ ನಿರ್ಗಮನ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಬಿಜೆಪಿ ತೊರೆದ ಲೋಬೋ ಕಾಂಗ್ರೆಸ್ ಸೇರುತ್ತಾರೆ ಎಂಬ ವದ್ದಂತಿಗಳಿದ್ದವು. ಆದರೆ ಕಾಂಗ್ರೆಸ್ ಕೂಡ ಪತ್ನಿಗೆ ಟಿಕೆಟ್ ನೀಡುವ ಕುರಿತು ಖಚಿತ ಭರವಸೆ ನೀಡದಿದ್ದರಿಂದ ತೃಣಮೂಲ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಜಯಭೇರಿ ಬಾರಿಸಿರುವ ಟಿಎಂಸಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಬೇರೆ ರಾಜ್ಯಗಳತ್ತಲೂ ಗಮನ ಹರಿಸಿದೆ. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಣಕ್ಕಿಳಿಯುತ್ತಿದೆ. ಟಿಎಂಸಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಜೆಪಿ ತೊರೆದ ಮೈಕೆಲ್ ಲೋಬೋ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಉತ್ತರ ಭಾಗದಲ್ಲಿ ಐದಾರು ಕ್ಷೇತ್ರಗಳ ಮೇಲೆ ಲೋಬೋ ಪ್ರಭಾವ ಇದೆ. ಹೀಗಾಗಿ ಟಿಎಂಸಿ ಅವರನ್ನು ಸೆಳೆದುಕೊಳ್ಳುವ ಯತ್ನ ನಡೆಸಿದೆ ಎನ್ನಲಾಗಿದೆ. ಒಂದೆಡೆ ಟಿಎಂಸಿ, ಕಾಂಗ್ರೆಸ್, ಅಮ್‍ಆದ್ಮಿ ಪಕ್ಷಗಳ ಪ್ರಬಲ ಪೈvಟಿಯಿಂದ ಕಂಗಾಲಾಗಿರುವ ಬಿಜೆಪಿಗೆ ಕ್ರಿಶ್ಚಿಯನ್ ಶಾಸಕರ ವಲಸೆ ತಲೆಬಿಸಿ ಮಾಡಿದೆ.
ಲೋಬೋ ಅವರಿಗಿಂತ ಮೊದಲು ಆರು ತಿಂಗಳ ಹಿಂದೆ ಕಾಟೋಲಿಮ್ ಕ್ಷೇತ್ರದ ಶಾಸಕಿ ಅಲಿನಾ ಸಲ್ಡಾನ್ ಬಿಜೆಪಿ ತೊರೆದಿದು ಅಮ್‍ಆದ್ಮಿ ಸೇರ್ಪಡೆಯಾಗಿದ್ದರು. ವಾಸ್ಕೋದ ಮತ್ತೊಬ್ಬ ಶಾಸಕ ಕಾರ್ಲೋಸ್ ಅಲ್ಮೇಡಾ, ವೆಲಿಮ್ ಕ್ಷೇತ್ರದ ಶಾಸಕ ಹಾಗೂ ಸಚಿವ ಫಿಲಿಪ್ ನೇರಿ ರೋಡ್ರಿಗಸ್ ಮತ್ತು ನುವೆಮ್ ಕ್ಷೇತ್ರದ ಶಾಸಕ ವಿಲ್ಪ್ರೇಡ ಡಿಸೋಜಾ ಅಲಿಯಾಸ್ ಬಾಬಾಶನ್ ಅವರು ಕೇಸರಿ ಪಕ್ಷ ತೊರೆದಿದ್ದಾರೆ. ಮಾಯೆಮ್ ಕ್ಷೇತ್ರದ ಶಾಸಕ ಪ್ರವೀಣ್ ಜಾಂತ್ಯೆ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಸೇರುವ ಸಾಧ್ಯತೆ ಇದೆ.
ಶಾಸಕರ ವಲಸೆ ಕುರಿತು ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಬಿಜೆಪಿ ಮಾತೃಭೂಮಿಗೆ ಸಂಪೂರ್ಣ ಭಕ್ತಿಯಿಂದ ಸೇವೆ ಸಲ್ಲಿಸುವ ದೊಡ್ಡ ಕುಟುಂಬ. ಕೆಲವು ಪಕ್ಷಾಂತರಿಗಳು ಹಾಗೂ ದುರಾಶೆಯ ವ್ಯಕ್ತಿಗಳಿಂದ ನಮ್ಮ ಅಜೆಂಡಾವನ್ನು ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
