ಹೊಸಕೋಟೆ,ಜು.21- ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಮೇಲೆ ವೇರ್ಹೌಸ್ನ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಮೂಲತಃ ಬಿಹಾರದ ಮನೋಜ್ಕುಮಾರ್ ಸದಯ್ (35), ರಾಮಕ್ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದೆಯ (22) ಹಾಗೂ ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ.
ನಿರ್ಮಾಣ ಹಂತದ ಸೌಪರ್ಣಿಕಾ ಬಹುಮಹಡಿ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ತಂಗಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿತ್ತು. ಕಳೆದ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮುಂಜಾನೆ ಮೂರು ಗಂಟೆ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಹುಡಾನ್ ಕಂಪನಿಯ ವೇರ್ಹೌಸ್ನ ಗೋಡೆ ಶೆಡ್ ಮೇಲೆ ಬಿದ್ದಿದೆ.
ಹಾಲೋಬ್ಲಾಕ್ ಇಟ್ಟಿಗೆಯಿಂದ ನಿರ್ಮಿಸಿದ್ದ ಗೋಡೆ ಬಿದ್ದ ರಭಸಕ್ಕೆ ಗಾಢ ನಿದ್ರೆಯಲ್ಲಿದ್ದ ನಾಲ್ವರು ಕಾರ್ಮಿಕರು ಅವಶೇಷಗಳಡಿಯೇ ಸಿಲುಕಿ ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕೆಲವರು ಗಾಯಗೊಂಡರೂ ಅವಶೇಷಗಳಿಂದ ಹೊರಗೆ ಬಂದಿದ್ದಾರೆ. ಪ್ರಸ್ತುತ ವೈಟ್ ಫೀಲ್ಡ್ನ ವೈದೇಹಿ ಆಸ್ಪತ್ರೆಯಲ್ಲಿ ಸುನಿಲ್ ಮಂಡಲ್, ಶಂಭು ಮಂಡಲ, ದಿಲೀಪ್, ದುರ್ಗೇಶ್ ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ಹಾಗೂ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.