ಕಾರಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆಜಿ ಚಿನ್ನ ಜಪ್ತಿ

ಬೆಂಗಳೂರು, ಜ.22-ಉತ್ತರ ಭಾರತದ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಸರಣಿ ಕನ್ನಗಳವು ಮಾಡಿಕೊಂಡು ಹೋಗುತ್ತಿದ್ದ ಅಂತಾರಾಜ್ಯ ಗ್ಯಾಂಗ್‍ನ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 75 ಲಕ್ಷ ಬೆಲೆ ಬಾಳುವ 1 ಕೆಜಿ 500 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಫಯೂಮ್ (35) ಮತ್ತು ಮುರಸಲೀಂ ಮಹಮ್ಮದ್ (42) ಬಂಧಿತ ಆರೋಪಿಗಳು.

ಉತ್ತರ ಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಸರಣಿ ಮನೆಗಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಪೊಲೀಸರಿಗೆ ಇದು ಭಾರೀ ಸವಾಲಾಗಿ ಪರಿಣಮಿಸಿತ್ತು. ಸಿಸಿಬಿ ಅಪರಾಧ ಉಪ ಪೊಲೀಸ್ ಆಯುಕ್ತ ರವಿಕುಮಾರ್, ಸಿಸಿಬಿ ಮಹಿಳಾ ಸಂರಕ್ಷಣಾ ದಳದ ನಾಗರಾಜ್ ನೇತೃತ್ವದಲ್ಲಿ ಇನ್ಸ್‍ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ ದೆಹಲಿ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮೊದಲು 4 ಕೆಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದರು.

ತದನಂತರ ತನಿಖೆ ಮುಂದುವರಿಸಿ ಆರೋಪಿಗಳೊಂದಿಗೆ ಉತ್ತರ ಪ್ರದೇಶ ರಾಜ್ಯದ ಚಂದೋಸಿ ಊರಿಗೆ ಹೋಗಿ ಸತತ ಐದು ದಿನಗಳವರೆಗೆ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ಸುಮಾರು 10 ಪ್ರಕರಣಗಳು ಪತ್ತೆಯಾಗಿವೆ. ಬ್ಯಾಡರಹಳ್ಳಿ ಠಾಣೆಯ 2 ಪ್ರಕರಣ, ಬೇಗೂರು ಹೆಣ್ಣೂರು, ಆಡುಗೋಡಿ, ಕಾಟನ್‍ಪೇಟೆ, ಸಿದ್ದಾಪುರ, ಜೆಜೆ ನಗರ, ರಾಜಾಜಿನಗರ ಮತ್ತು ಪುಟ್ಟೇನಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ 10 ಪ್ರಕರಣಗಳು ಪತ್ತೆಯಾಗಿವೆ.