ಬೀಗದ ಕೈಗಳ ಫೋಟೋ ತೆಗೆದು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಅಂದರ್

Social Share

ಬೆಂಗಳೂರು, ಫೆ.1- ಶಾಲೆ ಬಳಿ ಮಕ್ಕಳ ಪೋಷಕರ ಕೈಯಲ್ಲಿನ ಬೀಗದ ಕೀಗಳ ಫೋಟೋ ತೆಗೆದುಕೊಂಡು ಅವರ ಮನೆ ಗುರುತಿಸಿ ನಂತರ ನಕಲಿ ಕೀ ಮಾಡಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಆರ್‍ಟಿ ನಗರ ಮತ್ತು ಹೆಬ್ಬಾಳ ಠಾಣೆ ಪೊಲೀಸರು ಬಂಸಿ 59 ಲಕ್ಷ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾವಲ್‍ಭೈರಸಂದ್ರದ ಮುರಳಿ ಮತ್ತು ಕೆಜಿ ಹಳ್ಳಿಯ ಶಿವರಾಮ ಬಂಧಿತರು. ಇವರಿಬ್ಬರು ಕಳ್ಳತನ ಮಾಡಿದ ಆಭರಣಗಳನ್ನು ಕೆಜಿ ಹಳ್ಳಿಯಲ್ಲಿ ಗಿರವಿಗೆ ಇಟ್ಟಿದ್ದರು. ಡಿಸೆಂಬರ್ 7ರಂದು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾದ ನಂತರ ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿಗಳಲ್ಲಿ ದೊರೆತ ಆರೋಪಿಯ ಚಹರೆ ಪತ್ತೆ ಹಚ್ಚಿದ್ದಾರೆ.
ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಗಳನ್ನು ಪಡೆದು ಕೊಂಡು ಪರಿಶೀಲಿಸಿ ಕಾರ್ಯಾ ಚರಣೆ ಕೈಗೊಂಡು ಇಬ್ಬರು ಮನೆಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 59 ಲಕ್ಷ ರೂ. ಬೆಲೆ ಬಾಳುವ 1132 ಗ್ರಾಂ ತೂಕದ ಚಿನ್ನಾಭರಣ, 1210 ಕೆಜಿ ಬೆಳ್ಳಿ ಸಾಮಾನುಗಳು, ನಕಲಿ ಕೀಗಳ ತಯಾರಿಸುವ ಯಂತ್ರ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಶಾಲೆಗಳ ಬಳಿ ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಪೋಷಕರ ಮೈ-ಮೇಲಿನ ಚಿನ್ನಾಭರಣಗಳನ್ನು ಆರೋಪಿ ಮುರಳಿ ಗಮನಿಸುತ್ತಿದ್ದನು. ಅವರ ಕೈಯಲ್ಲಿದ್ದ ಕೀಗಳ ಫೋಟೋವನ್ನು ಚಾಲಾಕಿತನದಿಂದ ತೆಗೆದುಕೊಂಡು, ನಂತರ ಅವರನ್ನು ಹಿಂಬಾಲಿಸಿ ಮನೆಗಳನ್ನು ಗುರುತಿಸುತ್ತಿದ್ದನು.
ಕೀ ತಯಾರಿಸುವುದನ್ನು ನೋಡಿ ಕೊಂಡಿದ್ದ ಈ ಆರೋಪಿಯು ತಾನೇ ಸ್ವತಃ ಯಂತ್ರ ತಂದು ನಕಲಿ ಕೀ ತಯಾರಿಸಿಕೊಂಡು ತನ್ನ ಸಹಚರ ಶಿವರಾಮನನ್ನು ಸಹಾಯಕ್ಕೆ ಬಳಸಿಕೊಂಡು ಹಗಲು ಮತ್ತು ರಾತ್ರಿ ವೇಳೆ ಮನೆಗಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಆರ್‍ಟಿ ನಗರ ಪೊಲೀಸ್ ಠಾಣೆ 2 ಮನೆಗಳವು ಪ್ರಕರಣ, 2 ಹಗಲು-ರಾತ್ರಿ ಕನ್ನಗಳವು, 3 ದ್ವಿಚಕ್ರ ವಾಹನ ಕಳವು, ಹೆಬ್ಬಾಳ ಪೊಲೀಸ್ ಠಾಣೆಯ 2 ಮನೆಗಳವು ಪ್ರಕರಣ, 1 ಹಗಲು ಮತ್ತು ರಾತ್ರಿ ಕನ್ನಗಳವು, ಸಂಜಯನಗರ, ಡಿಜೆ ಹಳ್ಳಿ ಮತ್ತು ಅಮೃತಹಳ್ಳಿ ಠಾಣೆಯ ತಲಾ ಒಂದೊಂದು ಕನ್ನಗಳವು ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆಯಾಗಿರುತ್ತವೆ.
ಜೆಸಿ ನಗರ ಉಪ ವಿಭಾಗದ ಎಸಿಪಿ ರೀನಾ ಎನ್. ಸುವರ್ಣ ಮಾರ್ಗದರ್ಶನದಲ್ಲಿ ಆರ್‍ಟಿನಗರ ಮತ್ತು ಹೆಬ್ಬಾಳ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article