1.25 ಕೋಟಿ ಮೌಲ್ಯದ ಆಭರಣ ಕದ್ದಿದ್ದ ಕಳ್ಳರು 24 ಗಂಟೆಯಲ್ಲೇ ಅಂದರ್

Spread the love

ಬೆಂಗಳೂರು,ಏ.28- ಸಿವಿಲ್ ಎಂಜಿಯರ್ ವಾಸವಾಗಿರುವ ಅಪಾರ್ಟ್‍ಮೆಂಟ್‍ನ ಸ್ಲೈಡಿಂಗ್ ಡೋರ್ ಮುರಿದು ಒಳನುಗ್ಗಿ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ, ಪ್ಲಾಟಿನಂ, ವಜ್ರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಬಿಹಾರದ ಮೂವರನ್ನು 24 ಗಂಟೆ ಒಳಗೆ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 1.25 ಕೋಟಿ ರೂ. ಮೌಲ್ಯದ ಚಿನ್ನ, ಪ್ಲಾಟಿನಂ, ವಜ್ರದ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳು, ವಿದೇಶಿ ಕರೆನ್ಸಿ , 50 ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಿಹಾರ ಮೂಲದ ಬಬ್ಲೂ (34), ಬೋಲಾ(36) ಮತ್ತು ಶ್ರೀಧರ್(58) ಬಂಧಿತ ಆರೋಪಿಗಳು. ಮಾಲುಗಳ ಸಮೇತ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಲೆಗೆ ಬೀಳಿಸಿಕೊಂಡಿದ್ದಾರೆ.

ಬಿ.ಜಿ. ರಸ್ತೆ, ಅರಕೆರೆ ಗ್ರಾಮ, ರೋಷನ್ ಪ್ಲಾಟಿನಂ ಅಪಾರ್ಟ್‍ಮೆಂಟ್‍ನ ಏಳನೇ ಮಹಡಿಯಲ್ಲಿ ಸಿವಿಲ್ ಎಂಜಿನಿಯರ್ ತಜಮುಲ್ಲಾ ಭಾಷಾ ಎಂಬುವವರು ವಾಸವಾಗಿದ್ದಾರೆ. ಇವರ ಮಗ ವೈದ್ಯರು. ಏ.24ರಂದು ಬೆಳಗ್ಗೆ 10.30ರಿಂದ ನಿನ್ನೆ ಮುಂಜಾನೆ 2.30ರ ವರೆಗೆ ಇವರ ಮನೆಯಲ್ಲಿ ಯಾರೂ ಇರಲಿಲ್ಲ. ಬೀಗ ಹಾಕಿ ಹೊರ ಹೋಗಿದ್ದರು.

ಆ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಬಾಲ್ಕನಿಯ ಸ್ಲೈಡಿಂಗ್ ಡೋರ್ ಮುರಿದು ಮನೆಯ ಒಳಗೆ ನುಗ್ಗಿ ಕಬೋರ್ಡ್‍ನಲ್ಲಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ , ವಜ್ರ, ಪ್ಲಾಟಿನಂ ಹಾಗೂ ಬೆಳ್ಳಿ ವಸ್ತುಗಳು, ವಿದೇಶಿ ಕರೆನ್ಸಿ ಮತ್ತು ಹಣವನ್ನು ಕಳ್ಳತನಮಾಡಿ ಪರಾರಿಯಾಗಿದ್ದರು.
ತಜಮುಲ್ಲಾ ಭಾಷಾ ಅವರು ಮನೆಗೆ ವಾಪಾಸ್ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಮನೆಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ ತಕ್ಷಣ ಹುಳಿಮಾವು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳ ಪತ್ತೆಗಾಗಿ ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ ಜೋಷಿ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಚಂದ್ರಕಾಂತ್, ಸಬ್ ಇನ್ಸ್‍ಪೆಕ್ಟರ್‍ಗಳಾದ ವೀರಣ್ಣ, ಪ್ರಭುಗೌಡ ಪಾಟೀಲ್, ಬೇಗೂರು ಪೊಲೀಸ್ ಠಾಣೆ ಪಿಎಸ್‍ಐ ಸವಿನಯ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ತಂಡವು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಬಿಹಾರ ಮೂಲದ ಆರೋಪಿಗಳು ಬಿಹಾರಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ತಂಡ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಶೋಧ ನಡೆಸಿದೆ.

ಆರೋಪಿಗಳು ಬಸ್ ಮೂಲಕ ಬೆಂಗಳೂರಿನಿಂದ ಕೋಲಾರ ಮೂಲಕ ಬಂಗಾರ ಪೇಟೆಗೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೆರೆಗೆ ಪೊಲೀಸರು ಬಸ್‍ನ್ನು ಹಿಂಬಾಲಿಸಿದ್ದಾರೆ. ಆರೋಪಿಗಳು ಬಂಗಾರಪೇಟೆ ನಿಲ್ದಾಣದಲ್ಲಿ ಬಸ್ ಇಳಿದು ಬಿಹಾರಕ್ಕೆ ಪಲಾಯನ ಮಾಡಲು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದಾಗಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡರು.

ಆರೋಪಿಗಳ ಬಳಿಯಿದ್ದ 1,25,18,111 ರೂ. ಮೌಲ್ಯದ 1313 ಗ್ರಾಂ ತೂಕದ ಚಿನ್ನದ ವಡವೆಗಳು, 116.48 ಗ್ರಾಂ ತೂಕದ ವಜ್ರದ ಆಭರಣಗಳು, 20.91 ಗ್ರಾಂ ತೂಕದ ಪ್ಲಾಟಿನಂ ವಡವೆಗಳು, 123.13 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 4 ಬ್ರಾಂಡೆಡ್ ವಾಚ್‍ಗಳು, ವಿದೇಶಿ ಕರೆನ್ಸಿ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.