ಪುರಾತನ ಕಾಲದ ಚಿನ್ನದ ಒಡವೆ, ವಜ್ರದ ನೆಕ್ಲೆಸ್ ಕದ್ದಿದ್ದ ಆರೋಪಿ 8 ವರ್ಷಗಳ ಬಳಿಕ ಸೆರೆ
ಬೆಂಗಳೂರು, ಮೇ 23- ಪುರಾತನ ಕಾಲದ ಚಿನ್ನದ ಒಡವೆ ಹಾಗೂ ವಜ್ರದ ನೆಕ್ಲೆಸ್ ಕೊಂಡುಕೊಳ್ಳುವ ನೆಪದಲ್ಲಿ ಮನೆಗೆ ಹೋಗಿ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪತಿಯನ್ನು ಕೊಲೆ ಮಾಡಿ ಆಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿಗಳ ಪೈಕಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಆಡುಗೋಡಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಮಧು ಅಲಿಯಾಸ್ ಮಧುಸೂದನ್(27) ಬಂಧಿತ ಆರೋಪಿ.
ಲಕ್ಕಸಂದ್ರ ಬಡಾವಣೆಯ 10ನೆ ಮುಖ್ಯರಸ್ತೆ, 9ನೆ ಕ್ರಾಸ್ನಲ್ಲಿನ ಸುಶೀಲಾ ಹಾಗೂ ಉದಯ್ ರಾಜ್ ಸಿಂಗ್ ದಂಪತಿ ತಮ್ಮ ಮನೆಯಲ್ಲಿದ್ದ ಪುರಾತನ ಕಾಲದ ಚಿನ್ನ ಮತ್ತು ವಜ್ರದ ನೆಕ್ಲೆಸ್ ಸರವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ಆಭರಣಗಳನ್ನು ಮೈಸೂರಿನ ಅಭಿಷೇಕ್ ಮತ್ತು ಮಧು ಹಾಗೂ ಇತರ ಐದು ಮಂದಿ ಕೊಂಡುಕೊಳ್ಳುವ ನೆಪದಲ್ಲಿ ಉದಯ್ರಾಜ್ ಸಿಂಗ್ ಮನೆಗೆ 2014, ಮಾ 25ರಂದು ಹೋಗಿದ್ದಾರೆ.
ಚಿನ್ನದ ಒಡವೆಗಳು ಹಾಗೂ ವಜ್ರದ ನೆಕ್ಲೆಸ್, ಇತರೆ ಬೆಲೆ ಬಾಳುವ ಒಡವೆಗಳನ್ನು ದೋಚುವ ಉದ್ದೇಶದಿಂದ ದಂಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡೇ ಅವರ ಮನೆಗೆ ಹೋಗಿದ್ದಾರೆ. ಮೊದಲೇ ಮಾಡಿಕೊಂಡ ಸಂಚಿನಂತೆ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ ಉದಯ್ರಾಜ್ ಅವರ ಕತ್ತುಕೊಯ್ದು ಕೊಲೆ ಮಾಡಿ ಸುಮಾರು 18 ಲಕ್ಷ ರೂ. ಬೆಲೆ ಬಾಳುವ ವಜ್ರದ ನೆಕ್ಲೆಸ್, ಚಿನ್ನದ ಒಡವೆಗಳು, 2.50 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಸುಶೀಲಾ ಅವರು ಆಡುಗೋಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಿನ ಸಿಸಿಟಿವಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಶ್ರೀರಂಗ ಅಭಿಷೇಕ್ ಅಲಿಯಾಸ್ ಅಭಿಷೇಕ, ಮಧು ಅಲಿಯಾಸ್ ಮಧು ಸೂದನ್, ಕಿರಣ್, ಸತೀಶ್, ದಿಪೀಲ್ ಕುಮಾರ್, ಶ್ರೀಧರ, ಅಮಿತ್ ಕುಮಾರ್ ಅಲಿಯಾಸ್ ಬಿಟ್ಟುನನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ಪೂರ್ಣಗೊಳಿಸಿ ಎಲ್ಲಾ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು , ನ್ಯಾಯಾಲಯವು ಎರಡನೆ ಆರೋಪಿ ಮಧುಗೆ 2017, ಮೇ 5ರಂದು ಮಧ್ಯಂತರ ಜಾಮೀನು ನೀಡಿತ್ತು. ನಂತರ ಈತ ನ್ಯಾಯಾಲಯಕ್ಕೆ ಹಾಜರಾಗದೆ, ವಾಪಾಸ್ ಕಾರಾಗೃಹಕ್ಕೆ ಶರಣಾಗದೆ ತಲೆ ಮೆರಿಸಿಕೊಂಡಿದ್ದನು.
ನ್ಯಾಯಾಲಯವು ಉಲಿದ ಆರೋಪಿಗಳಿಗೆ ಪ್ರತ್ಯೇಕ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿರುತ್ತದೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಧುಗೆ ವಾರೆಂಟ್, ಉದ್ಗೋಷಣೆಗಳನ್ನು ಹೊರಡಿಸಿದ್ದರೂ ಆರೋಪಿ ಪತ್ತೆಯಾಗದೆ ಹೊರ ರಾಜ್ಯದ ಪಾಟ್ನಾ ಹಾಗೂ ಪುಣೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ , ಆತ ರಾಹುಲ್ ಎಂದು ಹೆಸರು ಬದಲಾಯಿಸಿಕೊಂಡು ಅಲ್ಲೇ ಉದ್ಯೋಗ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬರೋಬ್ಬರಿ 8 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಮಧುವನ್ನು ಪತ್ತೆ ಹಚ್ಚುವಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ ಜೋಶಿ ಮಾರ್ಗದರ್ಶನದಲಿ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿದೆ.
ಈ ತಂಡದ ಕಾರ್ಯ ವೈಖರಿಯನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.