ಬೆಂಗಳೂರು,ಮಾ.12- ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ರನ್ಯಾರಾವ್‌ಗೆ ಖಾಕಿ, ಖಾದಿ, ಕಾವಿ ಕೃಪಾಕಟಾಕ್ಷ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಡಿಆರ್‌ಐ ಹಾಗೂ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿ, ಕೆಲವರ ಮನೆಗಳ ಮೇಲೆ ದಾಳಿ ಮಾಡಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು, ಕೆಲವರನ್ನು ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.
ರನ್ಯಾರಾವ್ ಅವರ ಮಲತಂದೆ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ಹಾಗೂ ಪ್ರಭಾವಿ ಪೊಲೀಸ್ ಅಧಿಕಾರಿ ಮತ್ತು ಇನ್ನೂ ಕೆಲವು ಪೊಲೀಸ್ ಅಧಿಕಾರಿಗಳ ನಿಕಟ ಸಂಪರ್ಕವಿದೆ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಲ್ಲದೆ ಈಗಾಗಲೇ ಬೆಳಕಿಗೆ ಬಂದಿ ರುವಂತೆ ಇಬ್ಬರು ಸಚಿವರ ಜೊತೆ ಒಡ ನಾಟವಿರುವುದು ಗೊತ್ತಾಗಿದೆ.
ಮಾ.3ರಂದು ದುಬೈನಿಂದ ರನ್ಯಾರಾವ್ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಸಿಕ್ಕಿಕೊಂಡಾಗ ಸಚಿವರೊಬ್ಬರಿಗೆ ದೂರವಾಣಿ ಕರೆ ಮಾಡಿರುವುದಲ್ಲದೆ, ಮೆಸೇಜ್ ಹಾಕಿರುವುದು ಸಹ ಡಿಆರ್‌ಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇದೀಗ ಆರ್‌ಟಿನಗರದಲ್ಲಿರುವ ಸ್ವಾಮೀಜಿಯೊಬ್ಬರು ಸಹ ರನ್ಯಾಗೆ ನಿಕಟವರ್ತಿ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ದುಬೈನಲ್ಲಿ ಕಚೇರಿ ತೆರೆದಿರುವ ಈ ಸ್ವಾಮೀಜಿ ಕ್ರಿಪ್ಟೊ ಕರೆನ್ಸಿ ಹಣ ವಿನಿಮಯ ಮಾಡುತ್ತಿದ್ದರು ಎಂಬುದು ಬಯಲಾಗಿದೆ.
ಈ ಸ್ವಾಮೀಜಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಗಣ್ಯವ್ಯಕ್ತಿಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿರುವುದನ್ನು ಡಿಆರ್‌ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ರನ್ಯಾ ಬಂಧನವಾದ ವೇಳೆ ಡಿಆರ್‌ಐ ಅಧಿಕಾರಿಗಳು ಆಕೆಯ ಮೊಬೈಲ್ ವಶಕ್ಕೆ ಪಡೆದು ಸಂಪರ್ಕ ಜಾಲದ ಬಗ್ಗೆ ಇಂಚಿಂಚು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಖಾಕಿ, ಖಾದಿ ಮತ್ತು ಕಾವಿ ಹಾಗೂ ಗಣ್ಯವ್ಯಕ್ತಿಗಳ ದೂರವಾಣಿ ಸಂಖ್ಯೆಗಳು ಕಂಡುಬಂದಿವೆ.
ಈಕೆ ದುಬೈಗೆ ಹೋದ ಸಂದರ್ಭದಲ್ಲಿ ಅವರುಗಳಿಗೆ ಕರೆ ಮಾಡಿರುವ ಹಿನ್ನಲೆಯಲ್ಲಿ ಸಿಬಿಐ, ಡಿಆರ್‌ಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಪಂಚತಾರ ಹೋಟೆಲ್ ಉದ್ಯಮಿಯೊಬ್ಬರ ಸಂಬಂಧಿ ತರುಣ್‌ನನ್ನು ಬಂಧಿಸಿರುವ ಡಿಆರ್‌ಐ ಅಧಿಕಾರಿಗಳು, ಈ ಪ್ರಕರಣದಲ್ಲಿ ಮತ್ತಷ್ಟು ಮಂದಿಯನ್ನು ಬಂಧಿಸಲು ತನಿಖೆ ಚುರುಕುಗೊಳಿಸಿದ್ದಾರೆ.