“ಲಸಿಕೆ ಕುರಿತು ವಿಪಕ್ಷಗಳ ಟೀಕೆಗಳಿಗೆ ಪ್ರಧಾನಿ ಮೋದಿ ತಕ್ಕ ಉತ್ತರ ನೀಡಿದ್ದಾರೆ”

Social Share

ಬೆಂಗಳೂರು. ಜ.5; ಕೋವಿಡ್ ಲಸಿಕೆ ನೀಡಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿದ್ದು, ಈ ಮೂಲಕ ಲಸಿಕೆ ನೀಡಿಕೆ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಅರಬಿಂದೋ ಪದವಿಪೂರ್ವ ಕಾಲೇಜಿನಲ್ಲಿಂದು 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂಥಹ ದೊಡ್ಡ ದೇಶದಲ್ಲಿ ವ್ಯಾಪಕ ನೀಡುವುದು ಕಷ್ಟದ ಕೆಲಸವಾಗಿತ್ತು. ಲಸಿಕೆ ನೀಡಿಕೆ ಆರಂಭದಲ್ಲಿ ವಿರೋಧ ಪಕ್ಷಗಳ ಮುಖಂಡರು ಸಾಕಷ್ಟು ಟೀಕೆಗಳನ್ನು ಮಾಡಿ ಲಸಿಕೆ ಪಡೆಯಲು ಹಿಂದೇಟುಹಾಕಿದ್ದರು. ಆದರೆ ದೇಶಾದ್ಯಂತ ವ್ಯವಸ್ಥಿತ ಲಸಿಕಾ ಆಂದೋಲನಾ ಹಾಗೂ ಲಸಿಕೆ ಪಡೆದವರು ಕೋವಿಡ್ ನಿಂದ ಸುರಕ್ಷಿತ ವಾಗಿರುವುದನ್ನು ಖಚಿತಮಾಡಿಕೊಂಡ ನಂತರ ವಿರೋಧ ಪಕ್ಷಗಳ ನಾಯಕರು ಕೂಡ ಲಸಿಕೆ ಪಡೆದರು.ಇದು ನರೇಂದ್ರ ಮೋದಿಯವರ ಸರ್ಕಾರಕ್ಕೆ ದೊರೆತ ಯಶಸ್ಸು ಎಂದರು.
ಅಮೇರಿಕಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಇಂದು ನಿತ್ಯ ಲಕ್ಷ ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಅಂಥಹ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇದು ಸಾಧ್ಯವಾಗಿದ್ದು ಲಸಿಕೆ ನೀಡಿಕೆಯಿಂದ.ಆದರೂ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು.
ವಯಸ್ಕರ ನಂತರ ಇದೀಗ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ಬರುವ ಶನಿವಾರದ ಒಳಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.‌ಇದರ ಜೊತೆಗೆ ಉದ್ಯೋಗಕ್ಕಾಗಿ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಈ ವಯೋಮಾನದವರಿಗೂ ಕೂಡ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಎರಡು ಅಲೆಗಳನ್ನು ಎಲ್ಲರೂ ಸೇರಿ ಎದುರಿಸಿದ್ದೇವೆ.ಇದೀಗ ಮೂರನೆ ಅಲೆ ಬ‌ಂದಿದ್ದು.‌ಇದನ್ನೂ ಕೂಡ ಮೆಟ್ಟಿ ನಿಲ್ಲಬೇಕಿದೆ.‌ಇದಕ್ಕಾಗಿ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಪಡೆಯಲೇಬೇಕು. ಮೊದಲ ಡೋಸ್ ಲಸಿಕೆ ನೀಡಿದ 28 ದಿನಗಳ ನಂತರ ಎರಡನೆ ಡೋಸ್ ನೀಡಲು ಮತ್ತೆ ಎಲ್ಲ ಶಾಲಾ, ಕಾಲೇಜುಗಳಿಗೆ ತೆರಳಲಾಗುವುದು. ಒಂದು ವೇಳೆ ಆ ಸಂದರ್ಭದಲ್ಲಿ ಲಾಕ್ ಡೌನ್ ಆಗಿದ್ದರೂ ಕೂಡ ಎಲ್ಲರೂ ಬಂದು ಲಸಿಕೆ ಪಡೆಯಬೇಕು ಎಂದು ತಿಳಿಸಿದರು.
ನಾವು ಮಾನಸಿಕವಾಗಿ ಕೋವಿಡ್ ಓಡಿಸಲು ಸಿದ್ಧರಾಗಿದ್ದರೆ.ಅದರಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ.‌ಈ ಹಿನ್ನೆಲೆಯಲ್ಲಿ ನಿಮ್ಮ ಪೋಷಕರು ಹಾಗೂ ಮನೆಯ ಹಿರಿಯರಿಗೆ ಈ ಕುರಿತು ಮನವರಿಕೆ ಮಾಡಿಕೊಡುವಂತೆ ಕರೆ ನೀಡಿದರು.  ಕಾರ್ಯಕ್ರಮದಲ್ಲಿ ರಮೇಶ್ ಚಂದ್ರ ಎಸ್.ಹೊಂಗಲ್, ಟಿ.ಎನ್.ರವಿಪ್ರಕಾಶ್,ಅರಬಿಂದೋ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶೈಲಜಾ, ಡಾ.ಗೀತಾ ಕೆ.ರಾವ್ ಉಪಸ್ಥಿತರಿದ್ದರು.

Articles You Might Like

Share This Article