ಬೆಂಗಳೂರು,ಜ.17- ತುಮಕೂರು- ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ತೀವ್ರಗೊಂಡು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ನಾಗಸಂದ್ರ ಸಮೀಪ ಗೊರಗುಂಟೆಪಾಳ್ಯ 8ನೇ ಮೈಲಿ ನಡುವಿನ ಮೇಲ್ಸೇತುವೆಯ ಪಿಲ್ಲರ್ 9 ಮತ್ತು 10ರಲ್ಲಿ ಲಿಂಕ್ ಸಡಿಲಗೊಂಡಿದ್ದು, ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ.
ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮೇಲ್ಸೇತುವೆಯ ಲಿಂಕ್‍ಗಳನ್ನು ಸರಿಪಡಿಸಲು ಕೇಬಲ್ ಟೈಟ್ ಕಾಮಗಾರಿ ಆರಂಭಿಸಲಾಗಿದೆ. ಇದು ಜ.14ಕ್ಕೆ ಮುಗಿಯಲಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಸದ್ಯದ ಕಾಮಗಾರಿ ವೇಗ ನೋಡಿದರೆ ಇನ್ನು 15-20 ದಿನಗಳಾದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.
ಒಂದು ತಂಡ ಮಾತ್ರ ಕೇಬಲ್ ಟೈಟ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದೆ. ಕನಿಷ್ಠ ಮೂರು ತಂಡಗಳು ಕಾರ್ಯಾಚರಣೆ ನಡೆಸಿದರೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬಹುದಿತ್ತು. ಆದರೆ ಒಂದು ತಂಡ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ.
ಮೇಲ್ಸೇತುವೆ ಇಲ್ಲದೆ ಇದ್ದುದ್ದರಿಂದ 8ನೇ ಮೈಲಿಯಿಂದ ಯಶವಂತಪುರದವರೆಗೆ ಸಂಚಾರ ದಟ್ಟಣೆ ಮಿತಿಮೀರಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಸುಮಾರು 7-8 ಕಿ.ಮೀ ದೂರವನ್ನು ಕ್ರಮಿಸಲು ಒಂದರಿಂದ 2 ಗಂಟೆಗಳ ಕಾಲ ವ್ಯಯಿಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದಾಗಿದೆ.ಮೇಲ್ಸೇತುವೆ ಇದ್ದ ವೇಳೆ ಸುಮಾರು 7ರಿಂದ ಹತ್ತು ನಿಮಿಷಗಳ ಅವಯಲ್ಲಿ ಪ್ರಯಾಣಿಸಬಹುದಿತ್ತು. ದುರಸ್ತಿ ಕಾಮಗಾರಿಗಾಗಿ ಸೇತುವೆ ಸಂಚಾರ ನಿಷೇಸಲಾಗಿದೆ. ಕೆಳಭಾಗದಲ್ಲಿ ಸಂಚರಿಸುವ ವಾಹನಗಳು ಪರದಾಡುವಂತಾಗಿದೆ.
ಸುಮಾರು ನಾಲ್ಕೈದು ಸಿಗ್ನಲ್‍ಗಳಿದ್ದು, ಪ್ರತಿ ಸಿಗ್ನಲ್‍ನಲ್ಲಿಯೂ 5-10 ನಿಮಿಷ ನಿಲ್ಲಬೇಕಾಗಿದೆ. ವಾಹನಗಳ ವೇಗ 10-15 ಕಿ.ಮೀ ದಾಟುತ್ತಿಲ್ಲ. ಇತ್ತೀಚೆಗೆ ಕೋವಿಡ್‍ನಿಂದಾಗಿ ಸಂಚಾರ ದಟ್ಟಣೆ ನಿಯಂತ್ರಣದಲ್ಲಿದೆ. ಅದರಲ್ಲೂ ವಾರಾಂತ್ಯದ ನಿರ್ಬಂಧ, ನೈಟ್ ಕಫ್ರ್ಯೂನಿಂದಾಗಿ ವಾಹನಗಳ ಸಂಚಾರ ಗಣನೀಯವಾಗಿ ತಗ್ಗಿತ್ತು.
ಇಂದು ಎಂದಿನಂತೆ ದೈನಂದಿನ ಚಟವಟಿಕೆಗಳು ಆರಂಭವಾಗಿದ್ದು ಸಂಚಾರ ದಟ್ಟಣೆಯೂ ಹೆಚ್ಚಾಗಿದ್ದರಿಂದ ವಾಹನ ಸವಾರರು ಬೆಳಗ್ಗೆ ಗಂಟೆಗಟ್ಟಲೇ ಕಾದು ಹಿಡಿಶಾಪ ಹಾಕುತ್ತಿದ್ದರು.
