ಬೆಂಗಳೂರು,ಜ.27-ತುಮಕೂರು ರಸ್ತೆ ಸಂಚಾರದ ಅಧ್ವಾನ ಇನ್ನೂ ಮುಗಿದಿಲ್ಲ. ನೆಲಮಂಗಲ-ಗೊರಗುಂಟೆಪಾಳ್ಯದ ಮೇಲ್ಸೇತುವೆಯ ಪಿಲ್ಲರ್ ಸಂಖ್ಯೆ 102 ಮತ್ತು 103ರ ಲಿಂಕ್ ಕೇಬಲ್ ಸಡಿಲಗೊಂಡಿದ್ದರಿಂದ ಕಳೆದ ಡಿಸಂಬರ್ ಅಂತ್ಯದಲ್ಲಿ ಮೇಲ್ಸೇತುವೆ ಮೇಲಿನ ಸಂಚಾರವನ್ನು ದಿಢೀರ್ ಸ್ಥಗಿತಗೊಳಿಸಲಾಗಿತ್ತು.
ಮೇಲ್ಸೇತುವೆ ದುರಸ್ತಿ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಂಗಳು ಕಳೆದರೂ ಇನ್ನು ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ತುಮಕೂರು ಹೆದ್ದಾರಿ ಒಂದು ತಿಂಗಳಿನಿಂದ ಬಂದ್ ಆಗಿರುವುದರಿಂದ ಈ ಭಾಗದ ಸಂಚಾರ ವ್ಯವಸ್ಥೆ ಅಧ್ವಾನಗೊಂಡಿದೆ. ನೆಲಮಂಗಲದಿಂದ ನಗರ ಪ್ರವೇಶಿಸುವ ಹಾಗೂ ನಗರದಿಂದ ನೆಲಮಂಗಲ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರೂ ಅದು ಅಷ್ಟು ಪ್ರಯೋಜನಕಾರಿಯಾಗಿಲ್ಲ.
ತುಮಕೂರಿನಿಂದ ಬರುವ ವಾಹನಗಳು ಮಾದಾವಾರ ಬಳಿ ಬಲತಿರುವು ಪಡೆದು ನೈಸ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದಾಗಿದೆ. ನೈಸ್ ಟೋಲ್‍ನಲ್ಲಿ ವಾಹನ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಉಚಿತ ಪ್ರವೇಶ ಕಲ್ಪಿಸಲಾಗಿದೆ. ನಗರದಿಂದ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್‍ನಲ್ಲಿ ಎಡತಿರುವು ಪಡೆದು ರಿಂಗ್‍ರೋಡ್ ಮೂಲಕ ಸುಮನಹಳ್ಳಿ ಮಾರ್ಗವಾಗಿ ಮಾಗಡಿರಸ್ತೆಗೆ ಬಂದು ಅಲ್ಲಿಂದ ನೈಸ್ ರಸ್ತೆ ಮೂಲಕ ತುಮಕೂರು ಕಡೆಗೆ ಸಂಚರಿಸಬಹುದಾಗಿದೆ. ಪಿಲ್ಲರ್ ಸಂಖ್ಯೆ 102 ಮತ್ತು 103 ರ ಲಿಂಕ್ ಸಂಪರ್ಕದಲ್ಲಿ ಸಣ್ಣದೋಷ ಕಾಣಿಸಿಕೊಂಡಿದ್ದರಿಂದ ಒಂದು ವಾರಗಳ ಕಾಲ ರಸ್ತೆ ಬಂದ್ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಆದರೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಅದು ಸಣ್ಣದೋಷವಲ್ಲ. ಲಿಂಕ್‍ನಲ್ಲಿ ಭಾರಿ ದೋಷ ಇರುವುದು ಪತ್ತೆಯಾಗಿತ್ತು. ಹೀಗಾಗಿ ದಿಢೀರ್ ರಸ್ತೆ ಬಂದ್ ಮಾಡಲಾಯಿತು ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ದೋಷವನ್ನು ಒಂದು ವಾರದೊಳಗೆ ಪೂರ್ಣಗೊಳಿಸುವ ಹೇಳಿಕೆ ನೀಡಿ ಒಂದು ತಿಂಗಳೂ ಕಳೆದರೂ ಇನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದರೆ ಪಿಲ್ಲರ್‍ಗಳಲ್ಲಿನ ದೋಷ ಎಷ್ಟಿರಬಹುದು ಎಂದು ಯಾರು ಬೇಕಾದರೂ ಊಹಿಸಬಹುದು.
ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ರಸ್ತೆಯಲ್ಲಿ ಭಾರಿ ದೋಷ ಕಾಣಿಸಿಕೊಂಡರೂ ಏನು ಆಗಿಲ್ಲ ಎಂಬಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವರ್ತಿಸುತ್ತಿರುವುದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಕೆಲವೆ ದಿನಗಳಲ್ಲಿ ರಸ್ತೆ ಸಂಚಾರ ಆರಂಭಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಅದರ ಬಗ್ಗೆ ಚಕಾರ ಎತ್ತದಿರುವುದನ್ನು ಗಮನಿಸಿದರೆ ಸಧ್ಯಕ್ಕೆ ಸಮಸ್ಯೆಗೆ ಪರಿಹಾರ ದೊರಕುವಂತೆ ಕಾಣುತ್ತಿಲ್ಲ.
ಹೀಗಾಗಿ ಇನ್ನು ಕೆಲ ದಿನಗಳವರೆಗೆ ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡಿಕೊಂಡೇ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಮುಂದುವರೆಯುವುದಂತೂ ಗ್ಯಾರಂಟಿ.
# ಕಾರಣವೇನು?:
ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಅಂತಹ ರಸ್ತೆಯಲ್ಲಿರುವ ಮೇಲ್ಸೇತುವೆ ಸಮೀಪವೇ ಟೋಲ್ ಸ್ಥಾಪನೆ ಮಾಡಿರುವುದೇ ಇಷ್ಟೆಲ್ಲಾ ಅಧ್ವಾನಗಳಿಗೆ ಕಾರಣ ಎನ್ನಲಾಗಿದೆ. ಮೇಲ್ಸೇತುವೆ ಮೇಲೆ ಭಾರಿ ಪ್ರಮಾಣದ ವಾಹನಗಳು ಸಂಚರಿಸುತ್ತಲೆ ಇದ್ದರೆ ತೊಂದರೆ ಇಲ್ಲ. ಆದರೆ, ಮೇಲ್ಸೇತುವೆ ಸಮೀಪವೇ ಟೋಲ್ ಸ್ಥಾಪನೆ ಮಾಡಿರುವುದರಿಂದ ಭಾರಿ ವಾಹನಗಳು ಮೇಲ್ಸೇತುವೆ ಮೇಲೆ ಸಂಚರಿಸದೆ ಕೆಲ ನಿಮಿಷಗಳ ಕಾಲ ನಿಲ್ಲುವುದರಿಂದಲೇ ಪಿಲ್ಲರ್‍ಗಳ ನಡುವಿನ ಲಿಂಕ್‍ನಲ್ಲಿ ದೋಷ ಕಾಣಿಸಿಕೊಳ್ಳಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಮತ.
ಆದರೆ, ತಮ್ಮ ಬೇಜವಾಬ್ದಾರಿತನದ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದೋಷ ಸರಿಪಡಿಸಲಾಗುತ್ತಿದೆ. ಅದಷ್ಟು ಬೇಗ ಸಂಚಾರ ಆರಂಭಿಸಲಾಗುವುದು ಎಂದು ಹೇಳಿಕೆ ನೀಡಿಕೊಂಡೆ ಕಾಲಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
