Saturday, September 23, 2023
Homeಇದೀಗ ಬಂದ ಸುದ್ದಿಗೌರಿ-ಗಣೇಶ ಹಬ್ಬಕ್ಕೆ ತಟ್ಟದ ಬೆಲೆ ಏರಿಕೆ ಬಿಸಿ..!

ಗೌರಿ-ಗಣೇಶ ಹಬ್ಬಕ್ಕೆ ತಟ್ಟದ ಬೆಲೆ ಏರಿಕೆ ಬಿಸಿ..!

- Advertisement -

ಬೆಂಗಳೂರು, ಸೆ.17- ಹಬ್ಬಗಳ ಸಂದರ್ಭದಲ್ಲಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಬಾರಿ ಗೌರಿ-ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಅಷ್ಟಾಗಿ ತಟ್ಟಿಲ್ಲ. ದಿನಸಿ ಪದಾರ್ಥಗಳನ್ನು ಹೊರತುಪಡಿಸಿದರೆ ಹೂವಿನ ಬೆಲೆ ಕುಸಿದಿದ್ದು, ಹಣ್ಣುಗಳ ಬೆಲೆ ನಿಯಂತ್ರಣ ಕಾಯ್ದುಕೊಂಡಿದೆ. ಇದರಿಂದ ಗ್ರಾಹಕರಿಗೆ ಸಂತಸ ತಂದಿದ್ದರೆ, ರೈತರಿಗೆ ಸಂಕಷ್ಟ ತಂದಿದೆ.

ಗೌರಿ-ಗಣೇಶ ಹಬ್ಬ ಆಚರಣೆಗೆ ರಾಜ್ಯಾದ್ಯಂತ ಭರದ ಸಿದ್ಧತೆಗಳು ನಡೆಯುತ್ತಿದ್ದು, ಮಾರುಕಟ್ಟೆಗಳಲ್ಲಿ ಜನಜಾತ್ರೆ ಇದ್ದು, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ ವರಮಹಾಲಕ್ಷ್ಮಿ ಹಬ್ಬದಲ್ಲಿ ಭಾರೀ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು. ಆದರೆ, ಗೌರಿ-ಗಣೇಶ ಹಬ್ಬಕ್ಕೆ ಅಷ್ಟೇನೂ ಬೆಲೆ ಹೆಚ್ಚಾಗದೆ ಸಂಭ್ರಮ-ಸಡಗರ ಇಮ್ಮಡಿಗೊಳಿಸಿದೆ.

- Advertisement -

ನಗರದ ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೆಶ್ವರಂ, ಬಸವನಗುಡಿ, ವಿಜಯನಗರ ಸೇರಿದಂತೆ ನಗರದ ಪ್ರಮಖ ಕಡೆ ಹೂ-ಹಣ್ಣು, ಬಾಳೆ ಕಂದು, ಮಾವಿನ ಸೊಪ್ಪು, ಬೇಲದ ಹಣ್ಣು, ಗೌರಿ-ಗಣೇಶ ಮೂರ್ತಿಗಳು ಸೇರಿದಂತೆ ಮತ್ತಿತರ ವಸ್ತುಗಳ ಮಾರಾಟ ಭರಾಟೆ ಜೋರಾಗಿತ್ತು. ಗ್ರಾಹಕರು ಸಹ ಉತ್ಸಾಹದಿಂದ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂದವು.

ರಾಜ್ಯದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಫಸಲು ತಡವಾಗಿ ಬಂದಿದ್ದು, ಹಬ್ಬಕ್ಕೆ ಬೆಲೆ ಸಿಗುತ್ತದೆ ಎಂದು ಬಹಳಷ್ಟು ರೈತರು ಹೂ ಬೆಳೆದಿದ್ದು, ಏಕಕಾಲದಲ್ಲಿ ಅಪಾರ ಬೆಳೆ ಬಂದು ಅಪಾರ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಹೂಗಳ ಬೆಲೆ ಕುಸಿತವಾಗಿದೆ. ಹಬ್ಬದ ದಿನಗಳಲ್ಲಿ ಸಾಮಾನ್ಯವಾಗಿ ಒಂದು ಮಾರು ಸೇವಂತಿಗೆ 150 ರೂ. ಮೇಲಿರುತ್ತಿತ್ತು. ಆದರೆ, ಈ ಬಾರಿ 80 ರೂ. ದಾಟಿಲ್ಲ. ಕೆಜಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಹೆಚ್ಚಿನ ಪ್ರಮಾಣದಲ್ಲಿ ಬಾರದಿರುವುದರಿಂದ ಸ್ವಲ್ಪ ಬೆಲೆ ಜಾಸ್ತಿಯಾಗಿದ್ದು, ಕೆಜಿಗೆ 500 ರೂ.ಗೆ ಮಾರಾಟವಾಗುತ್ತಿದೆ. ಚೆಂಡು ಹೂ 25 ರೂ. ಕನಕಾಂಬರ 500 ರೂ.ಗೆ ಮಾರಾಟವಾಗುತ್ತಿದೆ.

ಇನ್ನು ಹಣ್ಣುಗಳ ಬೆಲೆ ನಿಯಂತ್ರಣದಲ್ಲಿದ್ದು, ಏಲಕ್ಕಿ ಬಾಳೆ ಕೆಜಿಗೆ 90 ರಿಂದ 100, ಮೂಸಂಬಿ 60, ದಾಳಿಂಬೆ 160, ಸೇಬು 150 ರಿಂದ 180 ರೂ.ಗೆ ಮಾರಾಟವಾಗುತ್ತಿದೆ. ಇನ್ನು ರಾಜ್ಯದಲ್ಲಿ ಮಳೆ ಕೊರತೆಯಿಂದ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಿದ್ದು, ಧಾನ್ಯಗಳ ಬೆಲೆ ಏರಿಕೆಯಾಗಿದೆ. ಕಳೆದ ಆರು ತಿಂಗಳಿನಿಂದ ಹಂತ ಹಂತವಾಗಿ ಪ್ರತಿ ಕೆಜಿಗೆ 5 ರಿಂದ 10ರೂ.ಗೆ ಏರಿಕೆಯಾಗುತ್ತ ಬಂದಿದೆ. ಅದರಲ್ಲೂ ಅಕ್ಕಿ ಬೆಲೆ 10 ರಿಂದ 12ರೂ. ವರೆಗೆ ಹೆಚ್ಚಳವಾಗಿದೆ. ತೊಗರಿ ಬೇಳೆ 130ರಿಂದ 200ರೂ., ಕಡಲೆ ಬೇಳೆ 80 ರಿಂದ 100ರೂ., ಹೆಸರು ಬೇಳೆ 120 ರಿಂದ 130, ಎಣ್ಣೆ ಲೀಟರ್‍ಗೆ 120 ರಿಂದ 150ರೂ.ಗೆ ಮಾರಾಟವಾಗುತ್ತಿದೆ.

ದಿನಸಿ ವಸ್ತುಗಳ ಬೆಲೆ ಏರಿಕೆ ಹೊರತುಪಡಿಸಿದರೆ ಹಬ್ಬಕ್ಕೆ ಬೇಕಾಗುವ ವಸ್ತುಗಳ ಬೆಲೆ ಏರಿಕೆಯಾಗದೆ ಸಂಭ್ರಮದಿಂದ ಹಬ್ಬ ಮಾಡುವಂತಾಗಿದೆ.

GouriGanesha, #festival, #flowers, #fruits,

- Advertisement -
RELATED ARTICLES
- Advertisment -

Most Popular