ಗೌರಿಲಂಕೇಶ್ ಹತ್ಯೆ ಕೇಸ್ : ಕೋಕಾ ಕಾಯ್ದೆ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ

Spread the love

ನವದೆಹಲಿ,ಅ.21- ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಿದ್ದನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.ಪತ್ರಕರ್ತೆ ಗೌರಿಲಂಕೇಶ್ 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿನಗರದ ತಮ್ಮ ಮನೆ ಸಮೀಪ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಹತ್ಯೆಯಾಗಿದ್ದರು.

ಆರೋಪಿಗಳ ವಿರುದ್ಧ ತನಿಖೆ ನಡೆಸಿದ ಕರ್ನಾಟಕ ರಾಜ್ಯದ ಪೆÇಲೀಸರು ಕೋಕಾ ಕಾಯ್ದೆಯನ್ನು ಜಾರಿ ಮಾಡಿದ್ದರು. ಇದನ್ನು ಆರೋಪಿ ಮೋಹನ್‍ನಾಯಕ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೋಕಾ ಅನ್ವಯಿಸಲು ಅನುಮತಿ ನೀಡಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಅನುಮತಿಯ ಆದೇಶವೇ ಕಾನೂನಿನಲ್ಲಿ ಕೆಟ್ಟದ್ದಾಗಿದೆ. ದೋಷಾರೋಪಣ ಪಟ್ಟಿ ಮತ್ತು ಕೋಕಾ ಜಾರಿಗೆ ನೀಡಿರುವ ಅನುಮತಿಯ ಆದೇಶ ನಿಲ್ಲಲು ಕಾಲುಗಳೇ ಇಲ್ಲ ಎಂದು ಹೇಳಿ ತೀರ್ಪು ನೀಡಿತ್ತು.

ಇದನ್ನು ಗೌರಿಲಂಕೇಶ್ ಸಹೋದರಿ ಕವಿತಾ ಲಂಕೇಶ್ ಮತ್ತು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಇದೇ ವರ್ಷದ ಏಪ್ರಿಲ್ 22ರಂದು ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಎ.ಎಂ.ಖಾನ್ವಾಲೀಕರ್ ಅವರು ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದ್ದಾರೆ.

ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ವಕೀಲರು, ಪೊಲೀಸರು ಮೊದಲು ಐಪಿಸಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಿದ್ದರು. ತನಿಖೆ ಮುಂದುವರಿದಂತೆ ಆರೋಪಿ ಮೋಹನ್‍ನಾಯಕ್ ಆಕ್ಯುಪ್ರೆಜರ್ ಕ್ಲಿನಿಕ್ ನಡೆಸುವ ನೆಪದಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಮೂಲಭೂತವಾದಿ ಸಿಂಡಿಕೇಟ್ ಸದಸ್ಯರಿಗೆ ಆಶ್ರಯ ಕಲ್ಪಿಸುತ್ತಿದ್ದ.

ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು. ಅರ್ಜಿದಾರರ ವಾದವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿದೆ.

Facebook Comments

Sri Raghav

Admin