ಬೆಂಗಳೂರು, ಆ.14- ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಷ್ಟ್ರೀಯ ಸಹೋದರತೆ, ಬಾಂಧವ್ಯ ಸಾರುವ ರಕ್ಷಾ ಬಂಧನ ಹಬ್ಬವನ್ನು ಪುಟ್ಟ ಮಕ್ಕಳೊಂದಿಗೆ ರಾಜಭವನದಲ್ಲಿಂದು ಆಚರಿಸಿದರು.ರಾಷ್ಟ್ರೋತ್ಥಾನ ಪರಿಷತ್ನ ಮಕ್ಕಳು ತಮ್ಮ ಪರಿಚಯ ಮಾಡಿಕೊಂಡ ರಾಜ್ಯಪಾಲರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ರಾಜ್ಯಪಾಲರು ಮಕ್ಕಳಿಗೆ ಸಿಹಿ ವಿತರಿಸಿ, ಆಶೀರ್ವದಿಸಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ರಾಜ್ಯಪಾಲರು, 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಅಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಮಕ್ಕಳು ಈ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ದೇಶದ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಬೇಕು. ಹರ್ ಘರ್ ತಿರಂಗ ಅಭಿಯಾನದಲ್ಲಿ ಮಕ್ಕಳು ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು, ರಾಜ್ಯದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ರಾಜ್ಯಪಾಲರು ಜನತೆಗೆ ಹಾಗೂ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.