ಸರ್ಕಾರಿ ಸುತ್ತೋಲೆಯಲ್ಲಿ ತರಹೆವಾರಿ ತಪ್ಪುಗಳು : ನೆಟ್ಟಿಗರ ಆಕ್ರೋಶ

Social Share

ಬೆಂಗಳೂರು,ಜು.16- ಮೊದಲೇ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ ಇದೀಗ ಸುತ್ತೋಲೆಯಲ್ಲಿ ಕನ್ನಡದ ವ್ಯಾಕರಣವನ್ನು ತಪ್ಪಾಗಿ ಮುದ್ರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಿನ್ನೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೊ ಮತ್ತು ವಿಡಿಯೋ ಚಿಕ್ರೀರಣ ಮಾಡುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿತ್ತು. ಕೊನೆಗೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ್ದರಿಂದ ತಡರಾತ್ರಿ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.

ಇದೀಗ ಈ ಸುತ್ತೋಲೆಯಲ್ಲೂ ಸಾಕಷ್ಟು ಕನ್ನಡ ವ್ಯಾಕರಣಗಳನ್ನು ತಪ್ಪಾಗಿ ಮುದ್ರಿಸಿ ಕನ್ನಡಿಗರು ಸಿಡಿದೇಳುವಂತೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಂತೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ವಿರುದ್ಧ ಕನ್ನಡಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಕನ್ನಡ ಅಕ್ಷರಗಳನ್ನೇ ಕಗ್ಗೊಲೆ ಮಾಡಿರುವ ಸರ್ಕಾರದ ಕ್ರಮಕ್ಕೆ ಕನ್ನಡಿಗರೇ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮೊದಲು ಅಧಿಕಾರಿಗಳಿಗೆ ಕನ್ನಡವನ್ನು ಸರಿಯಾಗಿ ಬರೆಯುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಬೇಕೆಂದು ಕಿವಿಮಾತು ಹೇಳಿದ್ದಾರೆ.

ಉದಾಹರಣೆಗೆ ನಡಾವಳಿ ಎಂಬ ಶಬ್ದವನ್ನು ನಡವಳಿ, ಪ್ರಸ್ತಾವನೆಯನ್ನು ಪ್ರಸತ್ತಾವನೆ, ಮೇಲೆ- ಮೇಲೇ, ಭಾಗ- ಬಾಗ, ಕರ್ನಾಟಕ- ಕರ್ನಾಟಾ, ಆಡಳಿತ- ಆಡಳಿದ ಎಂದು ಬರೆಯಲಾಗಿದೆ. ರಾಜ್ಯ ಸರಕಾರದ ಈ ಆದೇಶದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇನಾ ಆಡಳಿತದಲ್ಲಿ ಕನ್ನಡ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಪ್ರಧಾನ ಮತ್ತು ಸಾರ್ವಭೌಮ. ಇಲ್ಲಿನ ಕನ್ನಡಿಗರು ಬರೆಯುವಾಗ, ಮಾತನಾಡುವಾಗ, ನಿತ್ಯ ವ್ಯವಹಾರದಲ್ಲಿ ಕನ್ನಡ ಪದಗಳನ್ನು ತಪ್ಪಿಲ್ಲದೆ ಬಳಸಬೇಕಾದ್ದು ಕರ್ತವ್ಯ ಎಂದು ನೆಟ್ಟಿಗರು ಜಾಡಿಸಿದ್ದಾರೆ.

ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇಷ್ಟೊಂದು ಬೇಜವಬ್ದಾರರೇ ಎಂದು ಕೇಳಿದರೆ ಇನ್ನು ಕೆಲವರು ಮುಖ್ಯಮಂತ್ರಿ ಬೊಮ್ಮಾಯಿಯವರೇ ನಿಮ್ಮ ಸರ್ಕಾರದ ಅಕಾರಿಗಳಿಗೆ ಮೊದಲು ಕನ್ನಡ ಕಲಿಸಿ, ಕನ್ನಡ ತರಗತಿ ಪ್ರಾರಂಭಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ-ವಿಡಿಯೊ ಮಾಡದಂತೆ ನಿನ್ನೆ ಸರ್ಕಾರ ಆದೇಶ ಹೊರಡಿಸಿ ಕೆಲವೇ ಹೊತ್ತಿನಲ್ಲಿ ಆದೇಶ ಹಿಂಪಡೆದು ನಗೆಪಾಟಲಿಗೀಡಾಗಿತ್ತು. ಈಗ ಹಿಂಪಡೆದ ಆದೇಶದಲ್ಲಿ ಕನ್ನಡವನ್ನು ತಪ್ಪಾಗಿ ಮುದ್ರಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

Articles You Might Like

Share This Article