40% ಸರ್ಕಾರಕ್ಕೆ ಮಾಡಾಳು ಪುತ್ರ ಮತ್ತೊಂದು ಸಾಕ್ಷಿ : ಹೆಚ್‌ಡಿಕೆ

Social Share

ಬೆಂಗಳೂರು, ಮಾ.3- ಡಬಲ್ ಎಂಜಿನ್ ರಾಜ್ಯ ಬಿಜೆಪಿ ಸರ್ಕಾರ ಭರ್ತಿ ಶೇ. 40 ರಷ್ಟು ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ್ದಾರೆ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ ಸ್ವಚ್ಚ ಭಾರತ್ ಪರಿಕಲ್ಪನೆಯೇ ಅದ್ಭುತ. ಅಮಿತ್ ಶಾ ಅವರೇ ಎಂದು ಟೀಕಿಸಿದ್ದಾರೆ.

ಬಿಜೆಪಿ ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ, ಸಿಎಂ ಪ್ರತಿಕ್ರಿಯೆ ಏನು..?

ಅಮಿತ್ ಶಾ ಅವರೇ ಈಗ ಹೇಳಿ, ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು, ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನಿಮ್ಮ ಡಬಲ್ ಎಂಜಿನ್ ಸರ್ಕಾರ ಶೇ.40 ರಷ್ಟು ಕೊಚ್ಚೆಯಲ್ಲಿ ಉರುಳಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಕನ್ನಡಿಗರ ಹೆಮ್ಮೆಯ ಪ್ರತೀಕ ಸಾಬೂನು ಕಾರ್ಖಾನೆಯನ್ನು ಶೇ.40 ರಷ್ಟು ಕಮೀಷನ್ ಸೋಪಿನಿಂದ ಭರ್ಜರಿಯಾಗಿ ತೊಳೆಯುತ್ತಿರುವ ಬಿಜೆಪಿ ಪಕ್ಷದ ಶಾಸಕರ ಬೆನ್ನು ತಟ್ಟುವಿರೋ ಅಥವಾ ಪಕ್ಷದಿಂದ ಹೊರಗಟ್ಟುವಿರೋ? ಎಂದಿದ್ದಾರೆ.

ಶಾಸಕರ ಪುತ್ರರತ್ನ ಪಸಂದಾಗಿರಿಸಿದ್ದ ಕಂತೆಗಳು ಯಾರ ಹುಂಡಿಗೆ? ಶಾಸಕರ ಮನೆಯಲ್ಲೇ 6 ಕೋಟಿ ರೂ. ಸಿಕ್ಕರೆ, ಇನ್ನು ಶೇ.40 ರ ಚರಂಡಿಯಲ್ಲಿ ತೆವಳುತಿರುವ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು? ರಾಮರಾಜ್ಯ ಮಾಡುತ್ತೇವೆಂದು ಹೇಳಿ ಕರ್ನಾಟಕವನ್ನು ಕಮೀಷನ್ ರಾಜ್ಯಮಾಡಿದ್ದೀರಿ. ಹೌದಲ್ಲವೇ ಅಮಿತ್ ಶಾ ಅವರೇ ಎಂದು ವಾಗ್ದಾಳಿ ಮಾಡಿದ್ದಾರೆ.

ಮೈಸೂರಿನಲ್ಲಿ ನಿನ್ನೆ ನಾನು ಹೇಳಿದ್ದೆ, ಈ ರೀತಿ ಪರ್ಸಂಟೇಜ್ ವ್ಯವಹಾರ ಮುಂದುವರಿದರೆ ಮುಂದೆ 10 ಪರಪ್ಪನ ಅಗ್ರಹಾರದಂತಹ ಜೈಲುಗಳಾನ್ನಾದರೂ ಕಟ್ಟಿಸಬೇಕಾಗುತ್ತದೆ ಎಂದು. ಕಳೆದ ಮೂರೂವರೆ ವರ್ಷದಿಂದ ಕಮೀಷನ್ ಕೊಚ್ಚೆಯಲ್ಲಿ ಉರುಳಾಡಿದ್ದ ಬಿಜೆಪಿ ಸರ್ಕಾರ, ಈಗ ನೋಟಿನ ಕಂತೆಗಳೊಂದಿಗೆ ಆ ಅಸಹ್ಯದ ಪರಾಕಾಷ್ಠೆಯನ್ನು ದರ್ಶನ ಮಾಡಿಸಿದೆ. ಕಾಂಗ್ರೆಸ್ ಶೇ. 20, ಬಿಜೆಪಿ ಶೇ.40 ಎಂದು ಆರೋಪಿಸಿದ್ದಾರೆ.

ಕರ್ನಾಟಕವನ್ನು ಕಮೀಷನ್ ರಾಜ್ಯ ಮಾಡಿದ ಪಾಪ ಈ ರಾಷ್ಟ್ರೀಯ ಪಕ್ಷಗಳದ್ದು, ಇಂಥ ಪಾಪದ ದುಡ್ಡಿನಿಂದಲೇ ಚುನಾವಣೆ ನಡೆಸುವ ಕಮೀಷನ್‍ಗೇಡಿ ಪಕ್ಷಗಳ ಅಸಲಿ ಮುಖವನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು.

KSDL ಅಧ್ಯಕ್ಷ ಸ್ಥಾನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ

ಇಲ್ಲವಾದರೆ ಕರ್ನಾಟಕಕ್ಕೆ ಕಮೀಷನ್ ರಾಜ್ಯ ಎಂಬ ಹಣೆಪಟ್ಟಿ ಶಾಶ್ವತವಾಗುವ ಅಪಾಯವಿದೆ ಎಂದು ಹೇಳಿದ್ದಾರೆ.
ಇಂಥ ಪ್ರಕರಣಗಳೆಲ್ಲ ಕೊನೆಗೆ ಏನಾದವು ಎನ್ನುವುದು ಜನರಿಗೆ ಚೆನ್ನಾಗಿ ಗೊತ್ತು. ಸಾಂವಿಧಾನಿಕ ಸಂಸ್ಥೆಗಳನ್ನು ಹೇಗೆಲ್ಲೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವು ತನಿಖೆ ನಡೆಸುತ್ತಿರುವ ಪ್ರಕರಣಗಳು ಯಾವ ರೀತಿ ಹಳ್ಳ ಹಿಡಿದು ಹೋಗಿವೆ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ ಎಂದಿದ್ದಾರೆ.

ಜನತಾ ನ್ಯಾಯಾಲಯದಲ್ಲೇ ಇಂಥ ನಿರ್ಲಜ್ಜ ಪ್ರಕರಣಗಳಿಗೆ ಮುಕ್ತಿ ಕಾಣಿಸಬೇಕು. ಜನರದ್ದೇ ಅಂತಿಮ ತೀರ್ಪು ಹಾಗೂ ಜನರೇ ಪ್ರಜಾಪ್ರಭುತ್ವ ಉಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. 2023ಕ್ಕೆ ಆರೂವರೆ ಕೋಟಿ ಕನ್ನಡಿಗರು ನೀಡುವ ಜನಾದೇಶ ಈ ದಿಕ್ಕಿನಲ್ಲೇ ಇರುತ್ತದೆ ಎಂಬ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

government, commission, corruption, HD Kumaraswamy,

Articles You Might Like

Share This Article