ಬೆಂಗಳೂರು,ಫೆ.15- ಹಿಜಾಬ್ ವಿವಾದದ ಗೊಂದಲ ಮುಂದುವರೆದಿದೆ.ಹಿಜಾಬ್ ಧರಿಸಲು ಅವಕಾಶ ನೀಡದಿರುವುದಕ್ಕೆ ಇಂದು ಕೂಡ ಹಲವೆಡೆ ವಿದ್ಯಾರ್ಥಿಗಳು, ಪೋಷಕರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವೆಡೆ ವಿದ್ಯಾರ್ಥಿಗಳು ಗೈರುಹಾಜರಾದರೆ, ಇನ್ನು ಕೆಲವೆಡೆ ಹಿಜಾಬ್ ಧರಿಸಿಯೇ ಶಾಲೆಗಳಿಗೆ ಆಗಮಿಸಿದ ದೃಶ್ಯಗಳು ಕಂಡುಬಂತು.
ನಿನ್ನೆ ರಾಜ್ಯದ ಬಹುತೇಕ ಶಾಲೆಗಳಲ್ಲಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲೀಸರು ಬಿಗಿ ಕ್ರಮ ಕೈಗೊಂಡಿದ್ದರು. ರಾಯಚೂರು, ಕೊಪ್ಪಳ, ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಇರುವ ಶಾಲೆಗಳಿಗೆ ಇಂದು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು.
ಶಾಲಾ ಸಿಬ್ಬಂದಿ ಹೈಕೋರ್ಟ್‍ನ ಆದೇಶ, ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು,
ಶಿಸ್ತಿನಿಂದ ಸಮವಸ್ತ್ರ ಧರಿಸಿ ಭಾಗವಹಿಸಬೇಕೆಂಬ ಸಲಹೆ ನೀಡುತ್ತಿದ್ದರು. ಕೆಲವೆಡೆ ವಿದ್ಯಾರ್ಥಿಗಳು ಹಿಜಾಬ್‍ಗಾಗಿ ಪಟ್ಟು ಹಿಡಿದ ಘಟನೆ ಕೂಡ ನಡೆಯಿತು. ನಿನ್ನೆ ಹಿಜಾಬ್ ಧರಿಸಲು ಅವಕಾಶ ಸಿಗದ ಕಾರಣ ಶಿವಮೊಗ್ಗದಲ್ಲಿ 13 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಹಿಂದಿರುಗಿದ್ದರು.
ಇಂದು ಕೂಡ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದ ಹಿನ್ನೆಲೆಯಲ್ಲಿ ಶಾಲಾ ಪ್ರವೇಶಕ್ಕೆ ನಿರಾಕರಿಸಲಾಯಿತು. ಹಲವರು ಹಿಜಾಬ್ ತೆಗೆದು ಶಾಲಾ ತರಗತಿಗಳಿಗೆ ಹಾಜರಾದರೆ, ಕೆಲವರು ಹಿಜಾಬ್‍ಗಾಗಿ ಪಟ್ಟು ಹಿಡಿದು ತರಗತಿಗೆ ಮತ್ತು ಪರೀಕ್ಷೆಗೆ ಗೈರಾದರು.
ಉಡುಪಿ ಜಿಲ್ಲೆಯ ಹಲವೆಡೆ ಹಿಜಾಬ್ ಕಿರಿಕ್ ಮುಂದುವರಿದಿದೆ. ಕಾಪು ತಾಲ್ಲೂಕಿನ ಪಕೀರ ಕಟ್ಟೆಯ ಶಾಲೆ ಮುಲ್ಲಾರ್ ಗ್ರಾಮದಲ್ಲಿರುವ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್‍ಗೆ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.
ವಿಜಯಪುರದಲ್ಲಿ ಹಿಜಾಬ್ ಗೊಂದಲ ಮುಂದುವರೆದಿದ್ದು, ಹಲವು ಶಾಲೆಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬಂದರೆ ಶಿಕ್ಷಕಿಯರು ಬುರ್ಖಾ ಧರಿಸಿದ್ದು ಕಂಡುಬಂತು. ಹಿಜಾಬ್ ತೆಗೆಸಲು ಪೋಷಕರು ನಿರಾಕರಿಸಿದರು. ಕೋರ್ಟ್ ತೀರ್ಪು ಬರುವವರೆಗೆ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಇಲ್ಲ ಎಂದು ವಾಪಸ್ ಕರೆದುಕೊಂಡ ಹೋದ ಪ್ರಸಂಗವೂ ನಡೆಯಿತು.
ರಾಯಚೂರಿನಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಶಿಕ್ಷಣದ ಜತೆಗೆ ನಮಗೆ ಹಿಜಾಬ್ ಕೂಡ ಮುಖ್ಯವಾಗಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಹಲವು ಶಾಲೆಗಳಲ್ಲಿ ಪೋಷಕರು ಶಾಲಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ರಾಯಚೂರಿನ ಉರ್ದು ಶಾಲೆಗೆ ಇಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬಂದಿದ್ದರು. ಶಾಲಾ ಆಡಳಿತ ಸಿಬ್ಬಂದಿ ಹಿಜಾಬ್ ತೆಗೆದು ಶಾಲೆಗಳಲ್ಲಿ ಕೂರುವಂತೆ ಸೂಚನೆ ನೀಡಿದ್ದಕ್ಕೆ ಪೋಷಕರು ಮತ್ತು ಶಾಲಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.
ಹಿರಿಯೂರಿನ ಸರ್ಕಾರಿ ಪ್ರೌಢಶಾಲೆಗೆ ಇಂದು ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು ಗೊಂದಲಕ್ಕೆ ಕಾರಣವಾಯಿತು.
ತುಮಕೂರಿನಲ್ಲೂ ಹಿಜಾಬ್ ವಿವಾದ ಮುಂದುವರೆದಿದ್ದು ಇಂದು ಹಲವು ಶಾಲೆಗಳಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಗೊಂದಲ ಸೃಷ್ಟಿಯಾಯಿತು. ಕೋರ್ಟ್ ಆದೇಶದಂತೆ ಹಿಜಾಬ್ ಧರಿಸುವುದು ಸೂಕ್ತವಲ್ಲ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಹಲವೆಡೆ ಪೋಷಕರು ಮತ್ತು ಶಾಲಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.
ಇಲ್ಲಿನ ಎಸ್‍ವಿಎಸ್ ಪ್ರೌಢಶಾಲೆ ಮುಂದೆ ವಿದ್ಯಾರ್ಥಿಗಳ ಪೋಷಕರು ಜಮಾಯಿಸಿ ಹಿಜಾಬ್‍ಗಾಗಿ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ಪೋಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.
ನಿನ್ನೆ ಈ ಬಗ್ಗೆ ಸಾಕಷ್ಟು ಮನವರಿಕೆ ಮಾಡಿದರೂ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗೆ ಬಂದಿದ್ದಾರೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರಲ್ಲದೆ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಕೊಪ್ಪಳ, ಯಾದಗಿರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗಳಿಗೆ ಬಂದಿದ್ದರು. ಸಮವಸ್ತ್ರ ನೀತಿ ಅನುಸರಿಸದಿದ್ದರೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ.
ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ಶಾಲೆಗೆ ಬರಬೇಕು. ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಬಾರದು ಎಂದು ಶಾಲಾ ಆಡಳಿತ ಸಿಬ್ಬಂದಿ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದರು. ಹಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದರೆ ಮತ್ತೆ ಕೆಲವೆಡೆ ಹಿಜಾಬ್‍ಗಾಗಿ ಪಟ್ಟು ಹಿಡಿದು ಶಾಲೆಗಳಿಗೆ ಗೈರು ಹಾಜರಾಗಿದ್ದು ಶಿಕ್ಷಕ ಸಿಬ್ಬಂದಿಯನ್ನು ಸಂಕಷ್ಟಕ್ಕೀಡು ಮಾಡಿತ್ತು.
ಪರೀಕ್ಷೆಗೆ ಗೈರಾದ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಎಲ್ಲರೂ ಸರ್ಕಾರಿ ನಿಯಮವನ್ನು ಪಾಲಿಸಬೇಕೆಂದು ಡಿಡಿಪಿಐಗಳು ತಿಳಿಸಿದ್ದಾರೆ. ಈ ನಡುವೆ ನಾಳೆಯಿಂದ ಪದವಿಪೂರ್ವ ಮತ್ತು ಪದವಿ ಕಾಲೇಜುಗಳು ಪ್ರಾರಂಭವಾಗಲಿವೆ.
