ಸರ್ಕಾರಿ ನೌಕರರ ಶೇ.50ರಷ್ಟು ಹಾಜರಾತಿಗೆ ಸರ್ಕಾರ ಸಮ್ಮತಿ

ಬೆಂಗಳೂರು, ಜೂ.27- ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಸಿಬ್ಬಂದಿಗಳ ಹಾಜರಾತಿ ಕುರಿತಂತೆ ಪರಿಷ್ಕøತ ಆದೇಶ ಹೊರಡಿಸಿದೆ. ಈ ಮೊದಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶ ಮಾಡಿದ್ದರು.

ಲಾಕ್‍ಡೌನ್-5ರ ಅವಧಿಯಲ್ಲಿ ಸೋಂಕು ಹರಡುವ ಪ್ರಮಾಣ ತೀವ್ರವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಪೊಲೀಸ್, ವೈದ್ಯಕೀಯ, ಬೆಸ್ಕಾಂ, ವಾಣಿಜ್ಯ ತೆರಿಗೆ, ಅಬಕಾರಿ ಸೇರಿದಂತೆ ಹಲವಾರು ಇಲಾಖೆಗಳ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ.

ಸೋಂಕು ತಗುಲಿದ ತಕ್ಷಣ ಆ ಕಚೇರಿಗೆ ಮೂರ್ನಾಲ್ಕು ದಿನ ರಜೆ ನೀಡಿ ಸ್ಯಾನಿಟೈಜ್ ಮಾಡಿ ಮತ್ತೆ ಕೆಲಸ ಆರಂಭಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರ ಕಚೇರಿಯೇ ಸೀಲ್‍ಡೌನ್ ಆಗಿದೆ. ಶೇ.100ರಷ್ಟು ಹಾಜರಾತಿ ಇರುವುದರಿಂದ ಯಾವ ಕಚೇರಿಯಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ಮೊಟ್ಟ ಮೊದಲ ಬಾರಿಗೆ ಎಚ್ಚೆತ್ತುಕೊಂಡಿರುವ ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿಗಳನ್ನೊಳಗೊಂಡಂತೆ ಕೆಳಹಂತದ ಅಧಿಕಾರಿಗಳು ಶೇ.50ರಷ್ಟು ಹಾಜರಾತಿ ಇರಬೇಕು ಎಂದು ಪರಿಷ್ಕøತ ಅಧಿಕೃತ ಜ್ಞಾಪನ ಪತ್ರ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಆರ್ಥಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಕೊರೊನಾ ಹರಡುವ ಸಂಭವ ಇರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹಾಗೂ ಯಾವುದೇ ಅಡಚಣೆ ಇಲ್ಲದೆ ನಿರಾತಂಕವಾಗಿ ಇಲಾಖೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಉಪ ಕಾರ್ಯದರ್ಶಿ ವೃಂದ ಹಾಗೂ ಮೇಲ್ಪಟ್ಟ ವೃಂದದ ಅಧಿಕಾರಿಗಳು ಮಾತ್ರ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

ಉಳಿದಂತೆ ಅಧೀನ ಕಾರ್ಯದರ್ಶಿ ಹಾಗೂ ಅದಕ್ಕಿಂತ ಕೆಳಗಿನ ಅಧಿಕಾರಿಗಳು, ಸಿಬ್ಬಂದಿಗಳು ಶೇ.50ರಷ್ಟು ಮಾತ್ರ ಹಾಜರಾಗಬೇಕು. ಎಲ್ಲ ಸಂದರ್ಭಗಳಲ್ಲೂ ಮೇಲಧಿಕಾರಿಗಳ ಕರೆ ಮೇರೆಗೆ ತಕ್ಷಣ ಕೆಲಸಕ್ಕೆ ಹಾಜರಾಗಬೇಕೆಂಬ ಷರತ್ತಿಗೊಳಪಡಿಸಿ ಆಯಾ ಶಾಖೆಗಳು ಈಗಾಗಲೇ ಒದಗಿಸಿರುವ ಪಟ್ಟಿಯಲ್ಲಿರುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಅಥವಾ ಮುಂದಿನ ಆದೇಶದವರೆಗೆ ದಿನಬಿಟ್ಟು ದಿನ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

ಹಾಜರಾತಿಯಿಂದ ವಿನಾಯಿತಿ ಇರುವ ದಿನದಂದು ಮೊಬೈಲ್ ಸೇರಿದಂತೆ ಸಂಪರ್ಕ ಸಾಧನಗಳನ್ನು ಚಾಲ್ತಿಯಲ್ಲಿಟ್ಟುಕೊಂಡಿರಬೇಕು. ಮೇಲಧಿಕಾರಿಗಳು ಸೂಚನೆ ನೀಡಿದರೆ ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಿರಬೇಕು ಎಂದು ಹೇಳಲಾಗಿದೆ.