ಸರ್ಕಾರಿ ನೌಕರರು ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ : ಸಿಎಂ

ಬೆಂಗಳೂರು, ಜೂ.1- ರಾಜ್ಯ ಸರ್ಕಾರಿ ನೌಕರರು ಮುಂದಿಟ್ಟಿರುವ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ.  ರಾಜ್ಯ ಸರ್ಕಾರಿ ನೌಕರರ ಶತಮಾನೋತ್ಸವ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ಇಚ್ಛೆ ತಮಗಿದೆ. ಆದರೆ, ಈ ಬಾರಿ ಕೋವಿಡ್-19 ಬಂದ ಕಾರಣ ಆರ್ಥಿಕ ಸ್ಥಿತಿಗತಿ ನಿಮಗೆ ಗೊತ್ತಿದೆಯಲ್ಲವೆ ಎಂದು ಪ್ರಶ್ನಿಸಿದರು.

ಕಷ್ಟಕಾಲದಲ್ಲೂ ನೌಕರರು ಸರ್ಕಾರದ ಜತೆ ಕೈ ಜೋಡಿಸಿದ್ದೀರಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ನಮ್ಮ ಕರ್ತವ್ಯವೂ ಹೌದು. ಕೋವಿಡ್ ಬಂದ ಕಾರಣ ಸರ್ಕಾರದ ಬೊಕ್ಕಸಕ್ಕೆ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಈ ಬಗ್ಗೆ ನಿಮಗೆ ಚಿಂತೆ ಬೇಡ. ನಾನು ಈಡೇರಿಸುತ್ತೇನೆ ಎಂದು ವಾಗ್ದಾನ ಮಾಡಿದರು. ನನ್ನ ಅಧಿಕಾರಾವಧಿಯಲ್ಲಿ ನಿಮ್ಮೆಲ್ಲ ಬೇಡಿಕೆಗಳನ್ನೂ ಈಡೇರಿಸಲು ಪ್ರಯತ್ನಿಸಿದ್ದೇನೆ. ನಾನು ಯಾವಾಗಲೂ ನೌಕರರ ಪರವಾಗಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ನೀವೆಲ್ಲರೂ ಶಕ್ತಿಮೀರಿ ಶ್ರಮಿಸಿದ್ದೀರಿ. ಕಷ್ಟ ಕಾಲದಲ್ಲಿದ್ದಾಗ ನೀವು ಸರ್ಕಾರದ ಜತೆ ಕೈ ಜೋಡಿಸಿ ನಿಮ್ಮ ಸಂಬಳದಲ್ಲೂ ನಮಗೆ ದೇಣಿಗೆ ಕೊಟ್ಟಿದ್ದೀರಿ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ನೌಕರರ ಶ್ರೇಯೋಭಿವೃದ್ಧಿಗಾಗಿ ಯಾವಾಗಲೂ ಸ್ಪಂದಿಸಿದ್ದೇನೆ. ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗಗಳಿಗೆ ತಲುಪಿಸುವಲ್ಲಿ ಸಾಕಷ್ಟು ಶ್ರಮ ಹಾಕಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೌಕರರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಇನ್ನಷ್ಟು ಪ್ರಯತ್ನ ಮಾಡಬೇಕು. ಆಗ ಮಾತ್ರ ನಮ್ಮ ಸದುದ್ದೇಶ ಈಡೇರುತ್ತದೆ. ನೀವೆಲ್ಲರೂ ಒಳ್ಳೆಯ ಕಾರ್ಯ ಮಾಡಿದ್ದೀರಿ ಎಂಬ ತೃಪ್ತಿ ನನಗಿದೆ ಎಂದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಬರುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಹ ಸ್ಥಗಿತವಾಗಿರುವುದು ನಿಮ್ಮ ಗಮನಕ್ಕೆ ಬಂದಿದೆ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ರಾಜ್ಯದ ಸ್ಥಿತಿಗತಿಯನ್ನು ಸಿಎಂ ತೆರೆದಿಟ್ಟರು.

ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ ಯಾವುದೇ ಪ್ರತಿಕ್ರಿಯೆ ಕೊಡದೆ ಕಾರ್ಯಕ್ರಮದಿಂದ ನಿರ್ಗಮಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.