ಬೆಂಗಳೂರು,ಫೆ.8-ಸರ್ಕಾರಿ ಕೆಲಸ ಇದ್ದರೆ ಸಂಬಳದ ಜತೆಗೆ ಕೈ ತುಂಬಾ ಗಿಂಬಳ ಗ್ಯಾರಂಟಿ ಎಂಬ ಮಾತಿದೆ. ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಬಂದರೆ ಲಂಚ ನೀಡದೆ ಯಾವ ಕೆಲಸನೂ ಆಗೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಅಧಿಕಾರಿಗಳ ಲಂಚಗುಳಿತನಕ್ಕೆ ಬ್ರೇಕ್ ಹಾಕಲು ಸರ್ಕಾರ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಅದೇನಪ್ಪಾ ಅಂದ್ರೆ, ಇನ್ಮುಂದೆ ಸರ್ಕಾರಿ ಕಚೇರಿಗೆ ಬರುವ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಜೇಬಿನಲ್ಲಿರುವ ಹಣದ ಲೆಕ್ಕ ಬರೆದಿಡಬೇಕಂತೆ. ಕಚೇರಿ ಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು ಎಂಬ ಉದ್ದೇಶದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಇಂತಹ ಒಂದು ಹೊಸ ನಿಯಮ ಜಾರಿಗೆ ತಂದಿದ್ದಾರೆ.
ಸರ್ಕಾರಿ ಕಚೇರಿ, ನಿಗಮ ಮಂಡಳಿಗಳಿಗೂ ಸರ್ಕಾರದ ಈ ಆದೇಶ ಅನ್ವಯವಾಗಲಿದೆ. ಹೀಗಾಗಿ ಇನ್ಮುಂದೆ ಸರ್ಕಾರಿ ಕಚೇರಿಗಳ ಪ್ರತಿ ಸಿಬ್ಬಂದಿಗಳು ನಿತ್ಯ ತಮ್ಮ ಬಳಿ ಇರುವ ನಗದು ಘೋಷಣೆ ಮಾಡಿಕೊಳ್ಳಬೇಕಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಇಂತಹ ಸುತ್ತೋಲೆ ಹೊರಡಿಸಿದ್ದಾರೆ.
ಪ್ರತಿ ದಿನ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಎಲ್ಲ ಸಿಬ್ಬಂದಿಗಳು ತಮ್ಮಲಿರುವ ನಗದು ಘೋಷಿಸಿಕೊಳ್ಳಬೇಕು. ತಮ್ಮ ಬಳಿ ನಗದು ಎಷ್ಟಿದೆ ಎಂದು ರಿಜಿಸ್ಟರ್‍ನಲ್ಲಿ ನಮೂದಿಸಿ ಸಹಿ ಹಾಕಬೇಕು ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆಯಾ ಕಚೇರಿಗಳ ಬಿ ದರ್ಜೆ ಅಧಿಕಾರಿ ರಿಜಿಸ್ಟರ್‍ನ ಮೇಲುಸ್ತುವರಿವಹಿಸಿಕೊಳ್ಳಬೇಕು. ನಗದು ರಿಜಿಸ್ಟರ್ ನೋಡಿಕೊಳ್ಳುವ ಅಧಿಕಾರಿಗೆ ಅನುಮಾನ ಬಂದಲ್ಲಿ ನಗದು ಚೆಕ್ ಮಾಡುವ ಅಧಿಕಾರ ಹೊಂದಿರುತ್ತಾರೆ.
ಪರಿಶೀಲನೆ ಸಂದರ್ಭದಲ್ಲಿ ರಿಜಿಸ್ಟರ್‍ನಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚಿನ ನಗದು ಪತ್ತೆಯಾದರೆ ಅದನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಬಹುದಾಗಿದೆ. ಯಾವುದೇ ಸಮಯದಲ್ಲೂ ನಗದು ರಿಜಿಸ್ಟರ್‍ನ್ನು ಆಯಾ ಕಚೇರಿಯ ಮುಖ್ಯಸ್ಥರು ತಪಾಸಣೆ ನಡೆಸಬಹುದಾಗಿದೆ.
ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಚಾಲಕರು ಹಾಗೂ ನಿರ್ವಾಹಕರು ತಾವು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಬಳಿ ಇರುವ ಹಣದ ವಿವರಗಳನ್ನು ಡಿಪೋ ಮ್ಯಾನೇಜರ್‍ಗಳ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಬಳಿ ಲೆಕ್ಕ ಬರೆಸುವ ಪದ್ಧತಿಯೂ ಜಾರಿಯಲ್ಲಿದ್ದು, ಇದೇ ನಿಯಮವು ಸರ್ಕಾರಿ ನೌಕರರಿಗೂ ಅನ್ವಯವಾಗುವಂತೆ ಮಾಡಿರುವುದು ಭ್ರಷ್ಟಾಚಾರ ತಡೆಯಲು ಸೂಕ್ತ ನಿಯಮವಾಗಿದೆ.
ಬ್ಯಾಕಿಂಗ್ ಕ್ಷೇತ್ರದ ಡಿಜಿಟಲಿಕರಣದ ನಂತರ ಬಹುತೇಕ ಮಂದಿ ಜೇಬುಗಳಲ್ಲಿ ಹಣ ಇಟ್ಟುಕೊಂಡು ಓಡಾಡುವುದೇ ಅಪರೂಪ. ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೂ ಆನ್‍ಲೈನ್ ಮೂಲಕವೇ ಹಣ ಪಾವತಿ ಮಾಡುವುದು ವಾಡಿಕೆಯಾಗಿದೆ. ಸರ್ಕಾರದ ಈ ಹೊಸ ಆದೇಶದ ನಂತರ ಲಂಚಕ್ಕೂ ಆನ್‍ಲೈನ್ ಪದ್ಧತಿ ಜಾರಿಗೆ ಬಂದರೂ ಅಚ್ಚರಿಪಡುವಂತಿಲ್ಲ ಎನ್ನುವಂತಾಗಿದೆ.
