2ನೇ ಭೂ ಕಂದಾಯ ತಿದ್ದುಪಡಿಗೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಅ.24- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶದಲ್ಲಿನ ಬಿ ಖರಾಬು ಭೂಮಿಯನ್ನು ಸಕ್ರಮಗೊಳಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುವ ಕರ್ನಾಟಕ ಭೂ ಕಂದಾಯ (ಎರಡನೆ ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.  ಕಳೆದ ತಿಂಗಳು ನಡೆದ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು.

ಅಂಗೀಕರಿಸಲ್ಪಟ್ಟ ವಿಧೇಯಕವನ್ನು ರಾಜ್ಯ ಸರ್ಕಾರ ರಾಜ್ಯಪಾಲರ ಸಹಿಗಾಗಿ ಕಳುಹಿಸಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದು, ಈ ವಿಧೇಯಕ ಕಾಯ್ದೆಯಾಗಿ ರೂಪುಗೊಂಡಂತಾಗಿದೆ. ಖಾಸಗಿ ನಿವೇಶನ ನಡುವೆ ಸಿಲುಕಿರುವ ಸರ್ಕಾರಿ ಜಮೀನನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಮಾರ್ಗಸೂಚಿಯ ದರಕ್ಕೆ ಎರಡು ಪಟ್ಟು ದರ ನಿಗದಿ ಮಾಡಿ ಮಾರಾಟ ಮಾಡಬಹುದಾಗಿದೆ.

ರಾಜ್ಯದ ನಗರ ಪ್ರದೇಶನದಲ್ಲಿ ಮತ್ತು ಬಿಬಿಎಂಪಿ ವ್ಯಾಪ್ತಿಯ 18 ಕಿ.ಮೀ.ವರೆಗಿನ ಮತ್ತು ಇತರೆ ನಗರ ಪಾಲಿಕೆ ವ್ಯಾಪ್ತಿಯ 5 ಕಿ.ಮೀ.ವರೆಗಿನ ಖರಾಬು ಭೂಮಿಯನ್ನು ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.

ವಿಧೇಯಕ ಪ್ರಾರಂಭಕ್ಕೆ ಮೊದಲು ಸೊಸೈಟಿಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಇತರೆ ಉದ್ದೇಶಗಳಿಗೆ 15 ವರ್ಷಗಳಿಗಿಂತ ಮೊದಲು ಗುತ್ತಿಗೆ ನೀಡಿದ ಸರ್ಕಾರಿ ಭೂಮಿಗಳ ಮಂಜೂರಾತಿಯನ್ನು ಸರ್ಕಾರಕ್ಕೆ ಅಗತ್ಯ ಇಲ್ಲವೆಂದು ಖಚಿತಪಡಿಸಿಕೊಂಡ ಬಳಿಕ ಮಾರಾಟ ಮಾಡಲಾಗುತ್ತದೆ.