ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ತೆರಳಿ ಗೌರವ ಸಲ್ಲಿಸಿದ ರಾಜ್ಯಪಾಲರು

Social Share

ಬೆಂಗಳೂರು,ಆ.9- ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿ ವರ್ಷಾಚರಣೆ ಅಂಗವಾಗಿ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ನಗರದ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು.

ಸ್ವಾತಂತ್ರ್ಯ ಹೋರಾಟಗಾರರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ, ಸಿಹಿ ತಿನಿಸುವ ಮೂಲಕ ಗೌರವ ಸಲ್ಲಿಸಿದರು. ಈ ವಿಶೇಷ ಕ್ಷಣಗಳಿಗೆ ಸಚಿವರಾದ ಆರ್ ಅಶೋಕ್, ಅಶ್ವತ್ಥ ನಾರಾಯಣ ಸಾಕ್ಷಿಯಾದರು. ಇಂದು ಬೆಳಿಗ್ಗೆ ಮೊದಲಿಗೆ ಜೆಪಿನಗರದ ನಾಲ್ಕನೇ ಹಂತದ ಆಶ್ರಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ಆರ್.ನಾರಾಯಣಪ್ಪನವರ ಮನೆಗೆ ತೆರಳಿದ ರಾಜ್ಯಪಾಲರು, ಅವರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವರು ಆರ್.ಅಶೋಕ್, ಶಾಸಕ ಸತೀಶ್ ರೆಡ್ಡಿ ಮತ್ತಿತರ ಗಣ್ಯರು ಹಾಜರಿದ್ದರು. ನಂತರ ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶಂಕರನಾರಾಯಣ ರಾವ್ ಮನೆಗೆ ತೆರಳಿ ಅವರನ್ನು ಸನ್ಮಾನಿಸಿದರು. ಬಳಿಕ ಅವರೊಂದಿಗೆ ಕುಶಲೋಪರಿ ವಿಚಾರಿಸಿದ ರಾಜ್ಯಪಾಲರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ತಮಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಇದಾದ ನಂತರ ಮಲ್ಲೇಶ್ವಂರಂನಲ್ಲಿರುವ ನಾಗಭೂಷಣ್ ರಾವ್ ಅವರ ಮನೆಗೆ ತೆರಳಿದ ಗೌರವಾನ್ವಿತ ರಾಜ್ಯಪಾಲರು, ನಾಗಭೂಷಣ್ ರಾವ್ ಅವರನ್ನು ಸನ್ಮಾನಿಸಿದರು. ಈ ವೇಳೆ ನಾಗಭೂಷಣ್ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟಗಳಲ್ಲಿ ಭಾಗಿಯಾದ ಘಟನೆಗಳ ಬಗ್ಗೆ ವಿವರಿಸಿದರು. ಇದರ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು ತಮ್ಮ ದೇಶ ಸೇವೆ ನಮ್ಮೆಲ್ಲರಿಗೆ ಸೂರ್ತಿ. ನಿಮಗೆ ಹಾಗೂ ನಿಮ್ಮ ಕುಟುಂಬಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿ ತಲೆಬಾಗಿ ನಮಿಸಿದರು.

ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನಮತ್ತು ತಂತ್ರಜ್ಞಾನ ಹಾಗೂ ಜೀವನೋಪಾಯ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article