ಬೆಂಗಳೂರು, ಡಿ.21- ಹೊಗೆನಕಲ್ ಯೋಜನೆಯ ಎರಡನೆ ಹಂತವನ್ನು ಕೈಗೆತ್ತಿಕೊಳ್ಳುವುದಾಗಿ ತಮಿಳುನಾಡು ಮುಖ್ಯಮಂತ್ರಿ ಘೋಷಿಸಿದ್ದು, ಈ ಯೋಜನೆಗೆ ನಮ್ಮ ತೀವ್ರ ವಿರೋಧವಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4600 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಾಗಿ ಘೋಷಿಸಿರುವುದು ಗಮನಕ್ಕೆ ಬಂದಿದೆ. ಈ ಯೋಜನೆಯ ವಿವರವನ್ನು ನ್ಯಾಯಾಧೀಕರಣ ಮತ್ತು ಸುಪ್ರೀಂಕೊರ್ಟ್ ಮುಂದೆ ಪ್ರಸ್ತುತ ಪಡಿಸದಿರುವ ತಮಿಳುನಾಡಿನ ಯಾವುದೇ ಯೋಜನೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತದೆ ಎಂದರು.
ಕಾವೇರಿ ಕಣಿವೆಯಲ್ಲಿ ನ್ಯಾಯಾೀಕರಣ ಮತ್ತು ಸುಪ್ರೀಂಕೋರ್ಟ್ನ ತೀರ್ಪುಗಳಲ್ಲಿ ನೀರಿನ ಹಂಚಿಕೆಗೆ ಅನ್ವಯವಾಗಿ ಮಾತ್ರ ತಮಿಳುನಾಡು ಯೋಜನೆ ಕೈಗೊಳ್ಳಬೇಕು. ತಮಿಳುನಾಡು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಎರಡನೆ ಹಂತದ ಯೋಜನೆಯನ್ನು ಎಲ್ಲ ಕಾನೂನಾತ್ಮಕ ಕ್ರಮಗಳ ಮೂಲಕ ಆಕ್ಷೇಪಿಸುತ್ತದೆ.
ತಮಿಳುನಾಡು ಪ್ರಕಟಿಸಿರುವ ಈ ಯೋಜನೆ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿದ್ದು, ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಕಾನೂನಾತ್ಮಕ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ.
ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ. ಹೊಗೆನಕಲ್ ಪ್ರದೇಶ ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64ಕಿ.ಮೀ. ಉದ್ದದ ಭೂ ಪ್ರದೇಶ ವ್ಯಾಪ್ತಿ ಹೊಂದಿದೆ.
ಕಾವೇರಿ ನ್ಯಾಯಾಕರಣದ ಐ ತೀರ್ಪಿನ ಕಲಂ 13ರ ಅನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮದ ಮೂಲಕ ಕೈಗೆತ್ತಿಕೊಳ್ಳಲಾಗುತ್ತದೆ. ಕರ್ನಾಟಕ ಮತ್ತು ತಮಿಳುನಾಡಿನ ಹೊಗೆನಕಲ್ ಜಂಟಿ ಗಡಿ ರೇಖೆಯನ್ನು ಸರ್ವೆ ಆಫ್ ಇಂಡಿಯಾ ಮೂಲಕ ಇನ್ನೂ ಅಂತಿಮಗೊಳಿಸಿಲ್ಲ ಎಂದು ವಿವರಿಸಿದರು.
