ಬೆಂಗಳೂರು,ಜು.29-ವಾರ್ಡ್‍ಗಳ ಪುನರ್ ವಿಂಗಡಣೆ, ಮೀಸಲಾತಿ ಮತ್ತು ಗಡಿ ಗುರುತಿಸುವಿಕೆ ಸೇರಿದಂತೆ ಚುನಾವಣಾ ಪ್ರಕ್ರಿಯೆಗೆ ಸಮಯ ಅವಕಾಶ ಬೇಕಾಗಿರುವುದರಿಂದ ಬಿಬಿಎಂಪಿ ಚುನಾವಣೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಲು ಅವಕಾಶ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ನಿನ್ನೆ ಸುಪ್ರೀಂಕೋರ್ಟ್ ಒಂದು ವಾರದೊಳಗೆ ಮೀಸಲಾತಿ ಹಾಗೂ ವಾರ್ಡ್ ಪುನರ್ ವಿಂಗಡಣೆಯನ್ನು ಸಿದ್ದಪಡಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಆದರೆ ಒಂದು ವಾರದೊಳಗೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಎರಡು ತಿಂಗಳಾದರೂ ಸಮಯ ಅವಕಾಶ ನೀಡಬೇಕೆಂದು ಮೇಲ್ಮನವಿ ಅರ್ಜಿಯಲ್ಲಿ ಸರ್ಕಾರ ಕೋರಲಿದೆ.
ಕರ್ನಾಟಕ ನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಬಿಬಿಎಂಪಿಯಲ್ಲಿ ವಾರ್ಡ್‍ಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ರೊಟೇಷನ್ ಪ್ರಕಾರ ಮೀಸಲಾತಿ ನೀಡುವುದು, ಗಡಿ ಗುರುತಿಸುವಿಕೆ, ಮತದಾರರ ಕರಡು ಪಟ್ಟಿ ಸಿದ್ದಪಡಿಸುವುದು ಸೇರಿದಂತೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಅವಕಾಶ ಬೇಕಾಗುತ್ತದೆ.
ಹೀಗಾಗಿ ಎರಡು ತಿಂಗಳು ಸಮಯ ಅವಕಾಶ ನೀಡಲು ನ್ಯಾಯಾಲಯ ಅನುಮತಿ ನೀಡಬೇಕೆಂದು ಸರ್ಕಾರ ಮನವಿ ಮಾಡಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಿದ್ದಾರೆ.
ಸೋಮವಾರ ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದ್ದು ಒಂದು ವೇಳೆ ಸರ್ಕಾರದ ಮನವಿಯನ್ನು ನ್ಯಾಯಾಲಯ ಮನ್ನಿಸಿದರೆ ಬಿಬಿಎಂಪಿ ಚುನಾವಣೆ ಮತ್ತೆ ಮುಂದೆ ಹೋಗುವುದು ಬಹುತೇಕ ಖಚಿತವಾಗಿದೆ.
ಪರಿಸ್ಥಿತಿಯು ಪೂರಕವಾಗಿಲ್ಲ:
ಮೇಲ್ನೋಟಕ್ಕೆ ಚುನಾವಣೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ಮುಖ್ಯಮಂತ್ರಿಯಾದಿಯಾಗಿ ಸಂಪುಟದ ಎಲ್ಲ ಸಚಿವರು ಹೇಳುತ್ತಿದ್ದರಾದರೂ ವಾಸ್ತವವೇ ಬೇರೆ ಇದೆ.
ಒಂದು ಕಡೆ ಸರ್ಕಾರದ ಮೇಲೆ ಸರ್ಕಾರದ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಬೆಂಗಳೂರಿನಲ್ಲಿ ಹದಗೆಟ್ಟಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹಾಗೂ ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಚುನಾವಣೆ ನಡೆಸುವುದು ಪೂರಕವಲ್ಲ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬಂದಿದೆ.
ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದರು ಎಂಬಂತೆ ಕರಾವಳಿಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನಾಟ್ಟರ್, ನಿನ್ನೆಯಷ್ಟೇ ಮುಸ್ಲಿಂ ಯುವಕ ಫಾಜಿಲ್ ಕಗ್ಗೊಲೆ ಹೀಗೆ ಹತ್ತು ಹಲವು ಕಾರಣಗಳಿಂದ ಚುನಾವಣೆ ನಡೆಸುವುದು ಬಿಜೆಪಿಗೆ ಪೂರಕವಲ್ಲ ಎಂದು ಸಂಘದ ಪರಿವಾರದ ನಾಯಕರು ಸಲಹೆ ಕೊಟ್ಟಿದ್ದಾರೆ.
ಅಲ್ಲದೆ ಸ್ವತಃ ಮುಖ್ಯಮಂತ್ರಿಯವರೇ ಗುಪ್ತಚರ ವಿಭಾಗದಿಂದ ನಡೆಸಿರುವ ಆತಂಕರಿಕ ಸಮೀಕ್ಷೆ ಪ್ರಕಾರ ಪ್ರಸ್ತುತ ಸಂದರ್ಭದಲ್ಲಿ ಚುನಾವಣೆ ನಡೆಸಿದರೆ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ವರದಿ ನೀಡಿದೆ.
ಈ ಎಲ್ಲವನ್ನು ಗಮನಿಸಿಯೇ ಸರ್ಕಾರ ಚುನಾವಣೆ ಪ್ರಕ್ರಿಯೆಯನ್ನು ನಡೆಸಲು ಸಮಯ ಅವಕಾಶ ಬೇಕಾಗುತ್ತದೆ ಎಂಬ ಕಾರಣ ಮುಂದಿಟ್ಟುಕೊಂಡು ಮುಂದೂಡುವ ಪ್ರಯತ್ನ ನಡೆಸುತ್ತಿದೆ.
ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಗಳೂರಿಗೆ ಆಹ್ವಾನಿಸಿ ಬೃಹತ್ ಸಮಾವೇಶ ನಡೆಸಿ ವಿಶೇಷವಾಗಿ ಬೆಂಗಳೂರಿಗೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ ನಂತರ ಚುನಾವಣೆ ನಡೆಸುವುದು ಸರ್ಕಾರದ ಲೆಕ್ಕಾಚಾರವಾಗಿದೆ.
ಕಳೆದ ತಿಂಗಳು ಬೆಂಗಳೂರಿಗೆ ಮೋದಿ ಆಗಮಿಸಿದಾಗ ಸಬರ್ಬನ್ ರೈಲು ಯೋಜನೆ ಹಾಗೂ ಕೆಲವು ಮೂಲಭೂತ ಸೌಕರ್ಯಗಳಿಗೆ ಚಾಲನೆ ಕೊಟ್ಟಿದ್ದರು. ಇದೇ ರೀತಿ ಮುಂದಿನ ದಿನಗಳಲ್ಲೂ ನಗರಕ್ಕೆ ಕೆಲವು ವಿಶೇಷ ಯೋಜನೆಗಳನ್ನು ಪ್ರಕಟಿಸಿ ಅದನ್ನು ಖುದ್ದು ಪ್ರಧಾನಿಯವರಿಂದಲೇ ಚಾಲನೆ ನೀಡಬೇಕು. ಆ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.
ಈ ಎಲ್ಲವನ್ನು ಲೆಕ್ಕ ಹಾಕಿಕೊಂಡೇ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನವನ್ನು ಮುಂದುವರೆಸಿದೆ. ಅಂತಿಮವಾಗಿ ಸರ್ಕಾರದ ಪ್ರಯತ್ನಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಲಿದೆಯೇ ಎಂಬುದರ ಮೇಲೆ ಇದೆಲ್ಲವೂ ಅವಲಂಬಿತವಾಗಿದೆ.