ಡಿಜಿಟಲ್ ಮಾಧ್ಯಮಗಳಿಗೂ ಮಾನ್ಯತೆ, ಕೇಂದ್ರದ ಮಸೂದೆಯಲ್ಲಿ ಏನಿದೆ..?

Social Share

ನವದೆಹಲಿ, ಜು.16- ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 155 ವರ್ಷಗಳಷ್ಟು ಹಳೆಯದಾದ ‘ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಆಕ್ಟ್’ ಅನ್ನು ಸರಳೀಕೃತ ಆವೃತ್ತಿಯೊಂದಿಗೆ ಬದಲಿಸಲು ಕೇಂದ್ರ ಆಸಕ್ತಿ ಹೊಂದಿದ್ದು, ವಿವಿಧ ನಿಬಂಧನೆಗಳನ್ನು ಅಪರಾಧವಲ್ಲ ಎಂದು ಘೋಷಿಸುವ ಮತ್ತು ಡಿಜಿಟಲ್ ಮಾಧ್ಯಮವನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವ ಮಸೂದೆಯನ್ನು ಪರಿಚಯಿಸಲಾಗುತ್ತಿದೆ.

ಸೋಮವಾರದಿಂದ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ- 2022 ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಧ್ಯಮ/ಸಣ್ಣ ಪ್ರಕಾಶಕರ ಹಿತದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಕಾಯಿದೆಯ ಕಾರ್ಯವಿಧಾನಗಳನ್ನು ಸರಳವಾಗಿಸಲು ಮತ್ತು ಪತ್ರಿಕಾ ಮೌಲ್ಯಗಳನ್ನು ಎತ್ತಿಹಿಡಿಯಲು ತಿದ್ದುಪಡಿ ಸಹಾಯವಾಗಲಿದೆ.

ಪಿಆರ್‍ಬಿ ಕಾಯಿದೆ ಪ್ರಕಾರ ಪತ್ರಿಕೆ ಅಥವಾ ನಿಯತಕಾಲಿಕಗಳಲ್ಲಿ ಪ್ರಿಂಟರ್‍ನ ಹೆಸರನ್ನು ಮುದ್ರಿಸದಿದ್ದಲ್ಲಿ ಅಥವಾ ಪ್ರಿಂಟಿಂಗ್ ಪ್ರೆಸ್‍ಗಳ ಕಾರ್ಯಾಚರಣೆ ಬಗ್ಗೆ ಮ್ಯಾಜಿಸ್ಟ್ರೇಟ್ ಮುಂದೆ ಘೋಷಣೆ ಮಾಡದಿದ್ದರೆ ಪ್ರಕಾಶಕರಿಗೆ ದಂಡ ವಿಧಿಸಲು ಅವಕಾಶಗಳಿತ್ತು. ಪ್ರಸ್ತಾವಿತ ಕಾಯ್ದೆಯಲ್ಲಿ ಆ ನಿಬಂಧನೆಯನ್ನು ಸರಳೀಕರಿಸಲಾಗಿದೆ. ಜೊತೆಗೆ ಡಿಜಿಟಲ್ ಮಾಧ್ಯಮವನ್ನು ಪ್ರೆಸ್ ಮತ್ತು ಮಾಧ್ಯಮ ವ್ಯಾಪ್ತಿಗೆ ತರಲಾಗುತ್ತಿದೆ.

2019 ರ ಕರಡು ಮಸೂದೆಯ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ ಎಂದು ವ್ಯಾಖ್ಯಾನಿಸಿತ್ತು. ಇಂಟರ್ನೆಟ್, ಕಂಪ್ಯೂಟರ್, ಮೊಬೈಲ್ ನೆಟ್‍ವರ್ಕ್‍ಗಳ ಮೂಲಕ ಪ್ರಸಾರ ಮಾಡಬಹುದಾದ ಅಕ್ಷರ, ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಡಿಜಿಟೈಸ್ಡ್ ಫಾಮ್ರ್ಯಾಟ್‍ನ ಪ್ರಚಾರವನ್ನು ಸುದ್ದಿ ಎಂದು ವ್ಯಾಖ್ಯಾನಿಸಲಾಗಿದೆ.

ಪತ್ರಿಕೆಗಳಲ್ಲಿ ಸರ್ಕಾರಿ ಜಾಹಿರಾತುಗಳನ್ನು ನೀಡುವ ಮಾನದಂಡಗಳು ಅಥವಾ ಷರತ್ತುಗಳಿಗೆ ಸೂಕ್ತ ನಿಯಮಗಳನ್ನು ರೂಪಿಸಲು ಮತ್ತು ಅವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲನೆ ಮಾಡಲು ನೂತನ ಮಸೂದೆಯಲ್ಲಿ ಅವಕಾಶಗಳಿವೆ. ಇ-ಪೇಪರ್‍ಗಳ ನೋಂದಣಿಯ ಸರಳ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

#ಸ್ಪೀಕರ್ ಸಭೆ:
ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಎರಡು ದಿನಗಳ ಮೊದಲು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶನಿವಾರ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಸಂಜೆ ಸಂಸತ್ತಿನಲ್ಲಿ ಸಭೆ ನಡೆಯಲಿದ್ದು, ಹಲವು ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಭೆಯಲ್ಲಿ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ವಿಷಯಗಳು ಮತ್ತು ವಿವಿಧ ವಿಧೇಯಕಗಳ ಚರ್ಚೆಗೆ ಸಮಯ ಹಂಚಿಕೆ ಕುರಿತು ಚರ್ಚೆಗಳು ನಡೆಯಲಿವೆ. ಇತ್ತೀಚೆಗೆ ನೀಡಿರುವ ಅಸಂಸದೀಯ ಪದಗಳ ಪಟ್ಟಿಯಂತಹ ವಿಷಯಗಳು ಸಭೆಯಲ್ಲಿ ಚರ್ಚೆಗೆ ಒಳಗಾಗಬಹುದು ಎನ್ನಲಾಗಿದೆ.

ಸಂಸತ್ ಅಧಿವೇಶನ ಪ್ರಾರಂಭವಾಗುವ ಮೊದಲು ಸ್ಪೀಕರ್ ಸಾಂಪ್ರದಾಯಿಕವಾಗಿ ಸರ್ವಪಕ್ಷ ಸಭೆ ನಡೆಸುತ್ತಾರೆ. ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ.

Articles You Might Like

Share This Article