ಬೆಂಗಳೂರು,ಆ.9- ಮುಂದೆ ಹೋಗು ತ್ತಿದ್ದ ಕಂಟೈನರ್ ವಾಹನಕ್ಕೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬಿಎ ಪದವೀಧರೆ ಸಾವನ್ನಪ್ಪಿರುವ ಘಟನೆ ಕೆಎಸ್‍ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ನಿವಾಸಿ ಸುಶ್ಮತಾ(20) ಮೃತಪಟ್ಟ ಪದವೀಧರೆ. ಘಟನೆಯಲ್ಲಿ ಬಾಲಕ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಮೂಲತಃ ಮಂಡ್ಯದವರಾದ ಸುಶ್ಮಿತಾ, ಜಯಮ್ಮ(60), ಯಶವಂತ್(14) ಮತ್ತು ಸರಸಮ್ಮ(37) ದೇವರ ಕಾರ್ಯಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೊಡ್ಡಗಂಗವಾಡಿಗೆ ತೆರಳಿದ್ದರು. ದೇವರ ಕಾರ್ಯ ಮುಗಿಸಿಕೊಂಡು ಇವರೆಲ್ಲ ವಾಪಸ್ಸಾಗಲು ನಿರ್ಧರಿಸಿದ್ದರು. ಅಭಿಷೇಕ್ ಎಂಬುವರು ಇಪ್ಪತ್ತು ದಿನಗಳ ಹಿಂದಷ್ಟೇ ಕಾರು ಖರೀದಿಸಿದ್ದರು.
ಆ ಸಮಯದಲ್ಲಿ ತಮ್ಮ ಸಂಬಂಧಿ ಅಭಿಷೇಕ್ ಶೋರಂಗೆ ಕಾರು ಬಿಡಲು ಬೆಂಗಳೂರಿಗೆ ಹೊರಟಿರುವುದು ತಿಳಿದು ಅವರ ಕಾರಿನಲ್ಲಿಯೇ ಇವರೆಲ್ಲರೂ ಬರುತ್ತಿದ್ದರು. ಅಭಿಷೇಕ್ ಕಾರು ಚಾಲನೆ ಮಾಡುತ್ತಿದ್ದರು. ಪಕ್ಕದ ಸೀಟಿನಲ್ಲಿ ಸುಶ್ಮಿತಾ ಕುಳಿತಿದ್ದರು. ಹಿಂದಿನ ಸೀಟಿನಲ್ಲಿ ಜಯಮ್ಮ, ಯಶವಂತ್, ಸರಸಮ್ಮ ಕುಳಿತುಕೊಂಡಿದ್ದರು.
ಈ ಕಾರು ಬೆಳಗಿನ ಜಾವ 1 ಗಂಟೆ ಸುಮಾರಿನಲ್ಲಿ ನೈಸ್ ರಸ್ತೆಯ ಕನಕಪುರ ಬ್ರಿಡ್ಜ್ ಬಳಿ ಬರುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಂಟೈನರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಿಂದ ಗಾಯಗೊಂಡ ಅಭಿಷೇಕ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಉಳಿದವರು ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಶ್ಮಿತಾ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿಡಲಾಗಿದೆ.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.