ಕನಕಪುರ, ಜು.14- ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಒಡೆದು ಕಳ್ಳರು ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ಗ್ರಾಪಂಗೆ ಬಂದ ಕೆಲ ಅಧಿಕಾರಿಗಳು ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡು ಒಳನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾಗಿದೆ.
ಕಂಪ್ಯೂಟರ್ಗಳು ಮತ್ತು ಬೀರುವಿನಲ್ಲಿಟ್ಟಿದ್ದ ಕೆಲ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿರುವ ಸಾತನೂರು ಠಾಣೆ ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಪ್ರಕಾರ, ಕೆಲವು ಮಹತ್ವದ ದಾಖಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಆದರೆ, ಹಣ ಇಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದು, ಗ್ರಾಪಂನಲ್ಲಿ ದಾಖಲೆಗಳು ಕಳುವಾಗಿರುವ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಮ್ಮ ಪಹಣಿ, ಜಮೀನಿನ ದಾಖಲೆಗಳನ್ನೆಲ್ಲ ಗ್ರಾಪಂಗೆ ನೀಡಿರುತ್ತೇವೆ. ಅವು ಕಳುವಾಗಿದ್ದರೆ ಮುಂದೆ ಏನು ಎಂಬುದರ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ವರ್ಷದ ಹಿಂದೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ತರಿಸಿದ್ದ ಪೀಠೋಪಕರಣಗಳು, ಫ್ಯಾನ್, ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ಉಪಕರಣಗಳನ್ನು ಕಳ್ಳರು ದೋಚಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಹೊರತು ಕಳ್ಳರನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ರಕ್ಷಣಾ ಸಮಿತಿ ಸದಸ್ಯರು ಆರೋಪಿಸಿದ್ದಾರೆ.
ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಇದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ ಎಂದು ದೂರಿದ್ದಾರೆ.