ಚನ್ನೈ,ಜು.30- ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಕರ್ನಾಟಕದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಮಿಳುನಾಡು ಕಾಂಗ್ರೆಸ್ ಹಾಗೂ ವಿಡುದಲೈ ಚಿರುದೈಗಳ್ ಪಕ್ಷದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಭವ್ಯ ಸ್ವಾಗತ ನೀಡಿದರು.ಜನಸ್ತೋಮದ ನೂಕು ನುಗ್ಗಲ ನಡುವೆ ಸಿದ್ದರಾಮಯ್ಯ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, ಗಡಿ ರೇಖೆಗಳನ್ನು ಮೀರಿ ದೇಶದ ಉದ್ದಗಲಕ್ಕೂ ನನ್ನ ಸೈದ್ಧಾಂತಿಕ ನಿಲುವಿನ ಜತೆಗೆ ನಿಂತಿರುವ ಜನರೇ ನನ್ನ ರಾಜಕೀಯ ಶಕ್ತಿ ಎಂದು ಎಲ್ಲರಿಗೂ ಧನ್ಯವಾದ ಹೇಳಿದರು.
ತಮಿಳುನಾಡು ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರಿಗೆ ಹಾರ ಹಾಕಿ ಸಾಲು ಹೊದಿಸಿ ಸನ್ಮಾನಿಸಿದರು. ರಾಜ್ಯದಲ್ಲಷ್ಟೇ ಅಲ್ಲ ನೆರೆ ರಾಜ್ಯ ತಮಿಳುನಾಡಿನಲ್ಲೂ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ.ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಬದ್ಧತೆಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಲಾಗಿದೆ.
ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಸಚಿವ ದೊರೈಮುರುಗನ್, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಳಗಿರಿ, ಸಂಸದ ತಿರುಮಾವಲವನ್ ಮತ್ತಿತರರು ಹಾಜರಿದ್ದರು.
ಸ್ಟಾಲಿನ್ ಅವರು ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಬರಮಾಡಿ ಕೊಂಡು ಸನ್ಮಾನಿಸುವ ಜತೆಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಆಚರಣೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸಲು ಕರ್ನಾಟಕದಲ್ಲಿ ತಯಾರಿಗಳು ನಡೆದಿವೆ.ಸಿದ್ದರಾಮಯ್ಯ ಅವರ ಪ್ರವಾಸದ ಹಿನ್ನೆಲೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಯಾಗಿತ್ತು.
ಈ ಮೊದಲು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಸಿದ್ದರಾಮಯ್ಯ ಗಡಿ ಭಾಗಗಳಲ್ಲಿ ಪ್ರಚಾರ ಕೂಡ ನಡೆಸಿದ್ದರು.