ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ : ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ

Social Share

ನವದೆಹಲಿ,ಸೆ.30-ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಖಾಡಕ್ಕೆ ಇಳಿಸುವ ಮೂಲಕ ಪಕ್ಷದಲ್ಲಿ ಬಂಡಾಯಗಾರರಿಗೆ ಸೋನಿಯಾ ಗಾಂಧಿ ಬಿಸಿ ಮುಟ್ಟಿಸಿದ್ದಾರೆ. ಸಂಕಷ್ಟ ಸಮಯದಲ್ಲಿ ಪಕ್ಷದ ಜೊತೆ ನಿಲ್ಲದೆ ಅಧಿಕಾರಕ್ಕಾಗಿ ಒಳಗೊಳಗೆ ಬಂಡಾಯ ಚಟುವಟಿಕೆಗಳಿಗೆ ಕುಮ್ಮಕು ನೀಡುತ್ತಿದ್ದ ಘಟಾನುಘಟಿ ನಾಯಕರನ್ನು ಮೂಲೆಗೆ ಸರಿಸುವ ಮೂಲಕ ಮತ್ತೊಂದು ಸಂಘರ್ಷಕ್ಕೆ ಹೈಕಮಾಂಡ್ ಮುಂದಾಗಿದೆಯೇ ಎಂಬ ಚರ್ಚೆಗಳು ನಡೆಯಲಾರಂಭಿಸಿವೆ.

ಸೋನಿಯಾ ಗಾಂಧಿಯವರು ಪಕ್ಷದ ನಾಯಕತ್ವ ವಹಿಸಿಕೊಂಡಾಗಿನಿಂದಲೂ ಅಧ್ಯಕ್ಷರ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಾ ಬಂದಿದೆ. ನಾಯಕತ್ವ ಮತ್ತು ಹೈಕಮಾಂಡ್ ವಿರುದ್ಧ ಅಪಸ್ವರ ಇಲ್ಲದಂತೆ ಸಂಭಾಳಿಸಿಕೊಂಡು ಬರಲಾಗುತ್ತಿತ್ತು.

2014ರಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಾಗಲೂ ಕೆಲವು ನಾಯಕರು ಉಸಿರೆತ್ತದೆ ತಟಸ್ಥವಾಗಿದ್ದರು. 2019ರ ಚುನಾವಣೆಯಲ್ಲಿ ಮತ್ತೆ ಸೋಲು ಕಂಡಾಗ ಜಿ-23 ಗುಂಪು ತಲೆ ಎತ್ತಿತ್ತು. ರಾಹುಲ್ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಬಹಿರಂಗ ಪತ್ರಗಳನ್ನು ಬರೆದು ಪಕ್ಷಕ್ಕೆ ಮುಜುಗರ ಉಂಟು ಮಾಡಲಾಗಿತ್ತು.

ಒಂದು ಕಾಲದಲ್ಲಿ ಕಾಂಗ್ರೆಸ್‍ನ ಆಧಾರಸ್ತಂಭಗಳು, ಚಿಂತಕರ ಚಾವಡಿ ಎಂದೆಲ್ಲ ಗುರುತಿಸಿಕೊಂಡಿದ್ದ ಘಟಾನುಘಟಿಗಳೇ ಜಿ-23 ಠಳಾಯಿಸಿದವು. ಇದು ಪಕ್ಷ ಸಂಘಟನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದಲ್ಲದೆ ವರ್ಚಿಸ್ಸಿಗೆ ಭಾರೀ ಹಾನಿ ಮಾಡಿತ್ತು.

ಭಿನ್ನಮತೀಯರಾಗಿ ಗುರುತಿಸಿಕೊಂಡಿದ್ದ ಈ ನಾಯಕರು ಪಕ್ಷದ ತಳಮಟ್ಟದಿಂದಲೂ ನಾಯಕತ್ವದ ಆಯ್ಕೆಗೆ ಸಾಂಸ್ಥಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಲಾರಂಭಿಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆದ ಅಖಿಲ ಭಾರತ ಮಟ್ಟದ ಚಿಂತನಾ ಶಿಬಿರದಲ್ಲಿಯೂ ಭಾಗವಹಿಸಿ ಪಕ್ಷದ ಜೊತೆಗಿದ್ದವರು ಹೊರಬರುತ್ತಿದ್ದಂತೆ ಆಂತರಿಕ ಚುನಾವಣೆಗೆ ಬಲವಾದ ಪ್ರತಿಪಾದನೆ ಮಾಡಲು ಆರಂಭಿಸಿದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮೂಲಕವೇ ನಾಯಕತ್ವ ಆಯ್ಕೆಯಾಗಬೇಕು ಎಂಬುದು ಇವರ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಂಸ್ಥಿಕ ಚುನಾವಣೆ ಘೋಷಣೆ ಕಾಂಗ್ರೆಸ್‍ಗೆ ಅನಿವಾರ್ಯವಾಯಿತು.

ಅದರಂತೆ ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಚುನಾವಣೆಗೆ ಅಸೂಚನೆ ಹೊರಡಿಸಿದೆ. ಸೆ.20ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಆದರೆ ಈವರೆಗೂ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಕೊನೆಯ ದಿನವಾದ ಇಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಾಮಪತ್ರ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸೋನಿಯಾ ಬಣ ಉರುಳಿಸಿದ ದೊಡ್ಡ ದಾಳ ಎಂದು ವಿಶ್ಲೇಷಿಸಲಾಗುತ್ತಿದೆ. ಆಂತರಿಕ ಪ್ರಜಾಪ್ರಭುತ್ವಕ್ಕೆ ಒತ್ತಾಯ ಮಾಡುತ್ತಿದ್ದವರಿಗೆ ಈಗ ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆಗೆ ಅವಕಾಶ ನೀಡಲಾಗಿದೆ.

ಪಕ್ಷ ನಿಷ್ಠರು, ಗಾಂಧಿ ಕುಟುಂಬದ ಪರಮಾಪ್ತರು ಎಂದು ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. ಖರ್ಗೆ ವಿರುದ್ಧ ತಾವು ಸ್ರ್ಪಸುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ನಾಮಪತ್ರಗಳನ್ನು ಮರಳಿಸಿದ್ದಾರೆ. ಶಶಿ ತರೂರ್ ತಮ್ಮದ ಫ್ರೆಂಡ್ಲಿ ಫೈಟ್ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸುಮಾರು 5 ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿದ್ದಾರೆ. ವಿಧಾನಸಭೆಯಲ್ಲಿ ಸುಧೀರ್ಘ ಅನುಭವ ಹೊಂದಿದ್ದು, ಲೋಕಸಭೆ ಸಂಸದರಾಗಿ ಯುಪಿಎ ಒಂದು ಮತ್ತು ಎರಡರಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರೂ ಹೈಕಮಾಂಡ್ ಅವರನ್ನು ರಾಜ್ಯಸಭೆಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಮರಳುವಂತೆ ಮಾಡಿದೆ.

ರಾಜ್ಯಸಭೆಯ ಸದಸ್ಯರಾದ ಪ್ರಮೋದ್ ತಿವಾರಿ ಅವರು, ವಿವಾದಗಳಿಲ್ಲದ ಉಡಾಫೆ ಮಾತುಗಳನ್ನಾಡದ ಖರ್ಗೆ ತೂಕದ ನಾಯಕತ್ವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಲಿತ ಸಮುದಾಯದ ಅವರ ನಾಯಕತ್ವ ಪಕ್ಷಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ ಎಂದು ಹೇಳಿದ್ದಾರೆ.

ಚುನಾವಣೆಗಳ ಬಗ್ಗೆ ಪ್ರತಿಪಕ್ಷಗಳು ಭಿನ್ನ ವ್ಯಾಖ್ಯಾನ ಮಾಡಿವೆ. ವೈಎಸ್‍ಆರ್ ಕಾಂಗ್ರೆಸ್‍ನ ನಾಯಕ ವಿಜಯಸಾಯಿ ರೆಡ್ಡಿ, ಕಾಂಗ್ರೆಸ್‍ನ ಚುನಾವಣೆ ಪಾಕಿಸ್ತಾನದ ಚುನಾವಣೆ ಮಾದರಿಯಲ್ಲಿ ಯಾಗಿದೆ. ಅಲ್ಲಿ ಮಿಲಿಟರಿಯ ಜನರಲ್ ಹೇಳಿದವರು ಚುನಾಯಿತರಾಗುತ್ತಾರೆ. ಇಲ್ಲಿಯೂ ಅದೇ ಮಾದರಿಯಲ್ಲಿ ನಡೆಯುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಬೆಳವಣಿಗೆಗಳನ್ನು ಟೀಕಿಸಿದ್ದಾರೆ.

Articles You Might Like

Share This Article