ನವದೆಹಲಿ, ಜ.2- ಕೋವಿಡ್ ಆತಂಕದ ನಡುವೆಯೂ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಭಾರೀ ಪ್ರಮಾಣದ ಸುಧಾರಣೆಯಾಗಿದ್ದು, 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ. ಕಳೆದ ಡಿಸೆಂಬರ್‍ನಲ್ಲಿ ಒಟ್ಟು 1,29,780 ಕೋಟಿ ಜಿಎಸ್‍ಟಿ ಸಂಗ್ರಹವಾಗಿದೆ. ಇದರಲ್ಲಿ 22,578 ಕೋಟಿ ಕೇಂದ್ರ ಸಿ ಜಿಎಸ್‍ಟಿ ಯಾಗಿದ್ದು, 28,658 ಕೋಟಿ ರಾಜ್ಯ ಸೇವಾ ಸರಕು ತೆರಿಗೆಯಾಗಿದೆ.
ಅಂತಾರಾಷ್ಟ್ರೀಯ ಸೇವಾ ತೆರಿಗೆ 69,155 ಕೋಟಿಯಾಗಿದ್ದು, 9389 ಕೋಟಿ ರೂ. ಸೆಸ್ ಕೂಡ ಸೇರ್ಪಡೆಯಾಗಿದೆ. 2019ಕ್ಕಿಂತ ಶೇ.26ರಷ್ಟು 2021ರ ಡಿಸೆಂಬರ್‍ಗಿಂತ ಶೇ.13ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಸರಾಸರಿ ತ್ರೈಮಾಸಿಕವಾಗಿ 1.30 ಲಕ್ಷ ಕೋಟಿ ಜಿಎಸ್‍ಟಿ ಸಂಗ್ರಹದ ನಿರೀಕ್ಷೆಗಳಿವೆ.
ಈ ಬಾರಿ ಕೊಂಚ ಕಡಿಮೆ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿನ ಸುಧಾರಣಾ ಕ್ರಮದಲ್ಲಿ ಸಕಾರಾತ್ಮಕವೆಂದೇ ಭಾವಿಸಲಾಗಿದೆ.
ಕೋವಿಡ್ ಸೋಂಕಿನ ಬಳಿಕ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಮೊದಲ ತ್ರೈಮಾಸಿಕದಲ್ಲಿ 1.10, ಎರಡನೆ ತ್ರೈಮಾಸಿಕದಲ್ಲಿ 1.15 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು.
ಮೂರನೆ ತ್ರೈಮಾಸಿಕದಲ್ಲಿ 1.29 ಲಕ್ಷ ಕೋಟಿ ಸಂಗ್ರಹವಾಗಿದೆ. ಮುಂದಿನ ತ್ರೈಮಾಸಿಕದಲ್ಲಿ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸ ವ್ಯಕ್ತವಾಗಿದೆ.
ದೇಶದ 19 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹ ವೃದ್ಧಿಯ ದಾಖಲೆ ಏರುಗತಿಯಲ್ಲಿದೆ. ಕರ್ನಾಟಕ ಶೇ.12ರಷ್ಟು ಬೆಳವಣಿಗೆಯನ್ನು ಉಲ್ಲೇಖಿಸಿದೆ.
2020ರ ಡಿಸೆಂಬರ್‍ನಲ್ಲಿ 7459 ಕೋಟಿ ಸಂಗ್ರಹವಾಗಿದ್ದರೆ, ಕಳೆದ ಡಿಸೆಂಬರ್‍ನಲ್ಲಿ 8335 ಕೋಟಿ ರೂ. ಸಂಗ್ರಹವಾಗಿದೆ. ಉಳಿದಂತೆ ಪಂಜಾಬ್‍ನಲ್ಲಿ ಶೇ.16ರಷ್ಟು , ಚಂಡೀಗಢದಲ್ಲಿ ಶೇ.4, ಹರಿಯಾಣದಲ್ಲಿ ಶೇ.2, ದೆಹಲಿಯಲ್ಲಿ ಶೇ.9, ಉತ್ತರ ಪ್ರದೇಶದಲ್ಲಿ ಶೇ.2, ಸಿಕ್ಕಿಂನಲ್ಲಿ ಶೇ.11, ಅರುಣಾಚಲ ಪ್ರದೇಶದಲ್ಲಿ ಶೇ.16, ಮಣಿಪುರದಲ್ಲಿ ಶೇ.18, ಮೇಘಾಲಯದಲ್ಲಿ ಶೇ.14, ಅಸ್ಸೋಂ, ಜಾರ್ಖಂಡ್‍ನಲ್ಲಿ ಶೇ.3, ಒಡಿಶಾದಲ್ಲಿ ಶೇ.43, ಛತ್ತೀಸ್‍ಗಢ ಶೇ.10, ಮಹಾರಾಷ್ಟ್ರ ಶೇ.11, ಗೋವಾ ಶೇ.73, ಲಕ್ಷದ್ವೀಪದಲ್ಲಿ ಶೇ.170, ಕೇರಳದಲ್ಲಿ ಶೇ.7, ಅಂಡಮಾನ್-ನಿಕೋಬಾರ್‍ನಲ್ಲಿ ಶೇ.18, ತೆಲಂಗಾಣ ಶೇ.6, ಲಡಾಖ್ ಶೇ.83, ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.58ರಷ್ಟು ತೆರಿಗೆ ಸಂಗ್ರಹ ವೃದ್ಧಿಯಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಯಥಾಸ್ಥಿತಿ ಮುಂದುವರೆದಿದ್ದು, ಹಿಮಾಚಲ ಪ್ರದೇಶ, ಉತ್ತರಾಖಂಡ್, ರಾಜಸ್ಥಾನ, ಬಿಹಾರ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರಾ, ವೆಸ್ಟ್ ಬಂಗಾಳ್, ಮಧ್ಯ ಪ್ರದೇಶ, ಡಾಮನ್ ಡಯೂ, ಗುಜರಾತ್, ದಾದರ್ ನಾಗರ್ ಹವೇಲಿ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ತೆರಿಗೆ ಸಂಗ್ರಹ ಹಿನ್ನಡೆ ಅನುಭವಿಸಿದೆ. ಒಟ್ಟಾರೆ ತೆರಿಗೆ ಸಂಗ್ರಹ ಶೇ.5ರಷ್ಟು ವೃದ್ಧಿಯಾಗಿದೆ.
