ಬೆಂಗಳೂರು, ಆ.27- ಮುಂದಿನ ಎರಡು ತಿಂಗಳಲ್ಲಿ ತಮ್ಮ ರಾಜಕೀಯದ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ಜತೆಗೆ ಅವರು ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳ ಬಗ್ಗೆಯೂ ಮಾತನಾಡಿದ್ದೇನೆ ಎಂದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ವೇದಿಕೆ ಹಂಚಿಕೊಂಡ ಮಾತ್ರಕ್ಕೆ ಜೆಡಿಎಸ್‍ನಲ್ಲೇ ಉಳಿಯುತ್ತೇನೆ ಎಂದರ್ಥವಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೂ ಅವಕಾಶಗಳಿರುವ ಬಗ್ಗೆ ಜನರ ಗಮನಕ್ಕೆ ತಂದು ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇನೆ.
ಹುಣಸೂರು ವಿಧಾನಸಭಾ ಕ್ಷೇತ್ರದಿಂದ ತಮ್ಮ ಪುತ್ರ ಹರೀಶ್‍ಗೌಡ ಅವರಿಗೆ ಟಿಕೆಟ್ ಕೊಡಿ ಎಂದು ಕುಮಾರಸ್ವಾಮಿ ಅವರಲ್ಲಿ ಕೇಳಿಲ್ಲ ಎಂಬುದನ್ನು ವೇದಿಕೆಯಲ್ಲೇ ಸ್ಪಷ್ಟಪಡಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡ ಇತ್ಯರ್ಥವಾಗಿದೆ ಮಾತನಾಡೋಣ ಎಂದಿದ್ದಾರೆ. ಎಲ್ಲ ಕಡೆಯೂ ಅವಕಾಶವಿರುವ ಬಗ್ಗೆ ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೈತ್ರಿ ಸರ್ಕಾರ ಪತನವಾದ ನಂತರ ಪಕ್ಷದ ವರಿಷ್ಠರ ಬಗ್ಗೆ ಅಸಮಾಧಾನಗೊಂಡು ಜೆಡಿಎಸ್‍ನಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ನಿನ್ನೆ ಹುಣಸೂರಿನಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಎಚ್. ಡಿ.ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿತ್ತು.