ಬೆಂಗಳೂರು,ಮಾ.9-ಗುಜರಾತ್, ರಾಜಸ್ಥಾನ ಹೆಚ್ಚು ಮರುಭೂಮಿ ಹೊಂದಿದ್ದು, ಹಿಂದುಳಿದ ರಾಜ್ಯಗಳಾಗಿವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸಭೆಗೆ ತಿಳಿಸಿದರು. 2022-23ನೇ ಸಾಲಿನ ಆಯವ್ಯಯ ಅಂದಾಜು ಮೇಲು ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ, ಕೇಂದ್ರದ ಅನುದಾನದ ತಾರತಮ್ಯದ ವಿಚಾರ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಮಾಧುಸ್ವಾಮಿಯವರು, ಹಿಂದುಳಿದ ರಾಜ್ಯಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ಕೊಡುತ್ತದೆ. ಎಲ್ಲರಿಗೂ ಸಮಾನವಾಗಿ ಹಂಚಬೇಕಿಂದಿಲ್ಲ. ಅದು ಸಂವಿಧಾನದಲ್ಲೂ ಹೇಳಿಲ್ಲ ಎಂದರು.
ಆಗ ಶಾಸಕ ಎ.ಟಿ.ರಾಮಸ್ವಾಮಿ, ಗುಜರಾತ್ ಅತಿ ಹಿಂದುಳಿದಿದೆಯೇ ಅದಕ್ಕೆ ಹೆಚ್ಚು ಅನುದಾನ ಕೊಡುತ್ತಿಲ್ಲವೇ ಎಂದು ಪ್ರಶ್ನಿಸಿದಾಗ, ಹೌದು ಗುಜರಾತ್ ಹಿಂದುಳಿದ ರಾಜ್ಯ ಎಂದು ಮಾಧುಸ್ವಾಮಿ ಹೇಳಿದರು. ಕಾಂಗ್ರೆಸ್ ಶಾಸಕರು ಗುಜರಾತ್ ಮಾದರಿ ಎನ್ನುತ್ತಿದ್ದೀರಿ ಎಂದು ಛೇಡಿಸುವುದನ್ನು ಬಿಡಲಿಲ್ಲ.
ಇದಕ್ಕೂ ಮುನ್ನ ಮಾತನಾಡಿದ ಕುಮಾರಸ್ವಾಮಿ ಕೇಂದ್ರದ ಅನುದಾನ ನೀಡಿಕೆಯಲ್ಲಿ ಇಳಿಕೆಯಾಗಿದೆ. ಕೇಂದ್ರದ ಅನುಕಂಪ ತೋರಿಸಲು ರಾಜಸ್ವ ಕೊರತೆಯನ್ನು 14 ಸಾವಿರ ಕೋಟಿ ರೂ. ತೋರಿಸಲಾಗಿದೆಯೇ ಎಂಬ ಸಂದೇಹ ವ್ಯಕ್ತಪಡಿಸಿದರು.
100 ರೂನಲ್ಲಿ ನಮಗೆ 40 ರೂ. ಕೇಂದ್ರ ಸರ್ಕಾರ ಕೊಡುತ್ತದೆ. ರಾಜಸ್ಥಾನ, ಗುಜರಾತ್ ಹಾಗೂ ಉತ್ತರಪ್ರದೇಶಕ್ಕೆ ಹೆಚ್ಚು ಅನುದಾನ ಕೊಡುತ್ತದೆ. ಆ ರಾಜ್ಯಗಳ ಜನಸಂಖ್ಯೆ ಆಧರಿಸಿ ಕೊಡುತ್ತಿರಬಹುದು. ನಮ್ಮದು ಸಂಪತ್ಬರಿತ ರಾಜ್ಯ. ಸರಿಯಾಗಿ ತೆರಿಗೆ ಪಾವತಿಸುವುದೇ ಸರಿಯಲ್ಲ ಎಂಬ ಚರ್ಚೆ ಜನರಲ್ಲಿದೆ. ಕೇಂದ್ರ ಮಾಡುತ್ತಿರುವ ತಾರತಮ್ಯದಿಂದಾಗಿ ಈ ಭಾವನೆ ಉಂಟಾಗಿದೆ ಎಂದರು.
