ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ಆತಂಕ ಹುಟ್ಟಿಸಿದ ಗುಜರಾತ್ ಗೆಲುವು..!

Social Share

ಬೆಂಗಳೂರು,ಡಿ.8- ಪ್ರಧಾನಿ ನರೇಂದ್ರಮೋದಿ ತವರೂರು ಗುಜರಾತ್‍ನಲ್ಲಿ ಆಡಳಿತ ವಿರೋಧಿಯನ್ನು ಮೆಟ್ಟಿ ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ರಾಜ್ಯದ ಕೆಲವು ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಗುಜರಾತ್‍ನಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಸಚಿವರು, ಶಾಸಕರು ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆಂತರಿಕ ಸಮೀಕ್ಷೆಯಲ್ಲಿ ಸೋಲಾಗುತ್ತದೆ ಎಂದು ಅರಿತಿದ್ದ ಬಿಜೆಪಿ ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಿತ್ತು.

ಇದೀಗ ಪ್ರಕಟಗೊಂಡ ಫಲಿತಾಂಶದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಗೆದ್ದಿರುವುದು ರಾಜ್ಯ ಬಿಜೆಪಿಯ ಹಿರಿಯ ತಲೆಗಳಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಕೆಲ ದಿನಗಳಿಂದ ಹಿಂದೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು ಮಾಡಿದ್ದ ಒಂದು ಟ್ವೀಟ್ ರಾಜ್ಯ ಬಿಜೆಪಿ ನಾಯಕರ ಜಂಘಾಬಲವನ್ನು ಅಡಗಿಸುವಂತೆ ಮಾಡಿತ್ತು.

ಡಬಲ್ ಇಂಜಿನ್ ಸರ್ಕಾರವೆಂದು ಎದೆ ಬಡಿದುಕೊಳ್ಳಬೇಡಿ, ಗಡಿ ವಿವಾದ ಬಗೆ ಹರಿಸಿ: ಸಿದ್ದರಾಮಯ್ಯ

ಮುಂಬರುವ ವಿಧಾನಸಭೆ ಚುನಾವಣೆಗೆ ಗುಜರಾತ್ ಮಾದರಿಯನ್ನು ಅನುಸರಿಸಿ ಟಿಕೆಟ್ ನೀಡಬೇಕೆಂದು ನೀಡಿದ ಸಲಹೆ ಹಾಲಿ ಸಚಿವರು ಮತ್ತು ಶಾಸಕರಿಗೆ ನಡುಕ ಉಂಟು ಮಾಡಿತ್ತು. ಒಂದು ವೇಳೆ ಗುಜರಾತ್ ಮಾದರಿಯಂತೆ ಕರ್ನಾಟಕದಲ್ಲೂ ಟಿಕೆಟ್ ಹಂಚಿಕೆಯಾದರೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸುಮಾರು 35ರಿಂದ 40 ಶಾಸಕರಿಗೆ ಗೇಟ್ ಪಾಸ್ ಗ್ಯಾರಂಟಿ ಎಂಬ ಮಾತು ಕೇಸರಿ ಪಾಳಯದಲ್ಲಿ ಕೇಳಿಬರುತ್ತಿದೆ.

1994ರಿಂದ ಸತತವಾಗಿ ಗೆದ್ದು ಬರುತ್ತಿರುವ ಬಿಜೆಪಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆರ್.ಅಶೋಕ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ , ಹಾಲಿ ಸಚಿವರಾದ ಗೋವಿಂದ ಕಾರಜೋಳ, ಎಸ್.ಅಂಗಾರ, ಅರಗ ಜ್ಞಾನೇಂದ್ರ, ಆರ್.ಅಶೋಕ್ ಸೇರಿದಂತೆ ಹಾಲಿ ಸಚಿವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.

ಇದೇ ರೀತಿ ಹಾಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ತಿಪ್ಪಾರೆಡ್ಡಿ, ಕೆ.ಜಿ.ಬೋಪಯ್ಯ, ಜಗದೀಶ್ ಶೆಟ್ಟರ್, ಎಸ್.ಸುರೇಶ್‍ಕುಮಾರ್, ರಾಮಪ್ಪ ಲಮಾಣಿ ಸೇರಿದಂತೆ ಅನೇಕ ಶಾಸಕರಿಗೆ ಟಿಕೆಟ್ ನಿರಾಕರಿಸಿದರೂ ಅಚ್ಚರಿ ಇಲ್ಲ.
ಕೊನೆಯ ಕ್ಷಣದವರೆಗೂ ಟಿಕೆಟ್ ಘೋಷಿಸದೆ ಕುತೂಹಲ ಕೆರಳಿಸಿರುವ ಬಿಜೆಪಿ ನಾಮಪತ್ರ ಸಲ್ಲಿಸಲು ಎರಡು ದಿನಗಳು ಬಾಕಿ ಇರುವ ಹೊತ್ತಿಗೆ ಟಿಕೆಟ್ ಘೋಷಣೆ ಮಾಡುವ ಸಂಪ್ರದಾಯವನ್ನು ಹುಟ್ಟು ಹಾಕಿದೆ.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)

ಏಕೆಂದರೆ ಟಿಕೆಟ್ ಕೈ ತಪ್ಪಿದವರು ಬಂಡಾಯ ಸಾರಬಹುದೆಂಬ ಎಚ್ಚರಿಕೆಯಿಂದ ಈ ತಂತ್ರವನ್ನು ಅನುಸರಿಸುತ್ತಿದೆ. ಈಗ ಗುಜರಾತ್ ಮಾದರಿ ಕರ್ನಾಟಕಕ್ಕೂ ಅನ್ವಯವಾಗುವುದಾದರೆ ಹಾಲಿ ಸಚಿವ ಜೆ.ಸಿ.ಮಾಧುಸ್ವಾಮಿ ಹೊರತುಪಡಿಸಿ ಒಂದು ಮತ್ತು 2ನೇ ಹಂತದ ಬಹುತೇಕ ಸಚಿವರು ಮುಂದಿನ ಚುನಾವಣೆಯಲ್ಲಿ ವಿಶ್ರಾಂತಿ ಪಡೆಯುವುದು ಖಚಿತ ಎನ್ನಲಾಗುತ್ತಿದೆ.

ಆಡಳಿತ ವಿರೋ ಅಲೆ ಒಂದು ಕಡೆಯಾದರೆ, ಎರಡನೇ ಹಂತದ ನಾಯಕರನ್ನು ಬೆಳೆಸುವುದು ಹಾಗೂ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂಬ ನಿರ್ಧಾರಕ್ಕೆ ಬಂದರೆ ಬಹುತೇಕರು ಚುನಾವಣಾ ಕಣದಿಂದಲೇ ನಿವೃತ್ತಿ ಪಡೆಯಲಿದ್ದಾರೆ.

ಗಡಿ ದಾಟಿದ ಬಿಎಸ್‍ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕ್

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಚುನಾವಣೆಗೆ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದೇ ರೀತಿ ಅನೇಕರಿಗೆ ಕೇಂದ್ರ ವರಿಷ್ಠರು ಟಿಕೆಟ್ ನೀಡದೆ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

ಗುಜರಾತ್ ಚುನಾವಣೆಯ ಫಲಿತಾಂಶ ಬಿಜೆಪಿಗೆ ರಾಜ್ಯದಲ್ಲಿ ಹೆಚ್ಚು ಶಕ್ತಿ ತಂದಿದ್ದರೆ, ಕೆಲವು ನಾಯಕರಿಗೆ ಒಳಗೊಳಗೆ ಕಸಿವಿಸಿ ಉಂಟು ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

Gujarat BJP victory, Karnataka BJP, senior leaders,

Articles You Might Like

Share This Article