ನವದೆಹಲಿ, ನ.29- ಮೊದಲ ಹಂತದ ಗುಜರಾತ್ ವಿಧಾನಸಭೆ ಚುನಾವಣೆಗೆ ಎರಡು ದಿನಗಳು ಬಾಕಿ ಇರುವ ಹಂತದಲ್ಲಿ ರಾಜಕೀಯ ವಾಕ್ಸಮರಗಳು ತೀವ್ರಗೊಂಡಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ಅವರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ.
ಜೊತೆಗೆ ಗುಜರಾತ್‍ನಲ್ಲಿ 27 ವರ್ಷಗಳ ಬಿಜೆಪಿ ಆಡಳಿತದಲ್ಲಿ ಜನ ಸಾಮಾನ್ಯರಿಗೆ ಸಂತ್ರಸ್ಥರಾಗಿದ್ದಾರೆ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಉತ್ತಮ ಬದುಕು ಕಟ್ಟಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ನರೇಂದ್ರ ಮೋದಿ ಅವರೇ ಅಲ್ಲಿ ಇಲ್ಲಿ ಮಾತನಾಡಬೇಡಿ, ನಿಮ್ಮ ಬೆಂಗಾವಲು ಪಡೆ ಲೂಟಿ ಮಾಡಿದ್ದು ಯಾಕೆ ಹೇಳಿ ಎಂದು ಖರ್ಗೆ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಯುವಕರು, ರೈತರು, ಮಹಿಳೆಯರು, ಸಣ್ಣ ಉದ್ಯಮಿಗಳು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಜನರು ಬಿಜೆಪಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆಫ್ತಾಬ್ ಪ್ರಕರಣ ಲವ್ ಜಿಹಾದ್ ಅಲ್ಲ: ಓವೈಸಿ
27 ವರ್ಷಗಳ ಗುಜರಾತ್‍ನಲ್ಲಿ ಆಡಳಿತ ನಡೆಸಿದ ಬಿಜೆಪಿ ಜನರಿಗೆ ಉತ್ತರ ಹೇಳಬೇಕಿದೆ ಎಂದಿದ್ದಾರೆ.
ಗುಜರಾತ್ ಜನರ ಆದಾಯ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‍ಟಿ, ಕರೋನಾ ಅವಧಿಯಲ್ಲಿ ಸಹಾಯದ ಕೊರತೆಯಿಂದಾಗಿ ಗುಜರಾತ್‍ನ ಪ್ರತಿ ಕ್ಷೇತ್ರದ ಬೆನ್ನು ಮೂಳೆ ಮುರಿದಿದೆ. ಬೆಲೆಯೇರಿಕೆಯ ನಿರಂತರ ನಡುಕದಿಂದ ಸಾರ್ವಜನಿಕರ ಬದುಕು ದುಸ್ತರವಾಗಿದೆ ಎಂದಿದ್ದಾರೆ.
ಹಿಟ್ಟು, ಬೇಳೆಕಾಳುಗಳು, ಹಾಲು, ಮಕ್ಕಳ ಪೆನ್ಸಿಲ್, ಔಷಧಿಗಳು, ಚಿಕಿತ್ಸೆ ಸೇರಿದಂತೆ ಎಲ್ಲದರ ಮೇಲೂ ಜಿಎಸ್‍ಟಿ ವಿಧಿಸಲಾಗಿದೆ. ಅತಿ ಕಡಿಮೆ ಪ್ರಮಾಣದ ಬೆಂಬಲ ಬೆಲೆ ಹೆಚ್ಚಳ ಮಾಡುವ ಮೂಲಕ ಗುಜರಾತಿನ ರೈತರಿಗೆ ದ್ರೋಹ ಮಾಡಲಾಗಿದೆ.
ದೇಶದ ರೈತರ ಕೃಷಿ ಉತ್ಪಾದನೆ ಮೇಲೆ ಹೆಚ್ಚುವರಿಯಾಗಿ ಶೇ.50ರಷ್ಟು ದರ ನಿಗದಿ ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ ಯಾವ ಉತ್ಪನ್ನದ ಮೇಲೂ ಶೇ.9ಕ್ಕಿಂತ ಹೆಚ್ಚಿನ ಎಂಎಸ್‍ಪಿ ನಿಗದಿ ಮಾಡಿಲ್ಲ. ಇದು ರೈತರಿಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಜೊತೆಗೆ ಗೊಬ್ಬರ, ಡೀಸೆಲ್, ಜಿಎಸ್‍ಟಿ, ವಿದ್ಯುತ್ ಮತ್ತು ಒಳಹರಿವಿನ ಬೆಲೆ ಏರಿಕೆಯಿಂದ ಗುಜರಾತ್‍ನ ರೈತರೂ ಮತ್ತಷ್ಟು ಬೇಸತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿ ಆಶ್ರಯದಲ್ಲಿರುವ ಕ್ರಿಮಿನಲ್‍ಗಳು ಗುಜರಾತ್‍ನ ದಲಿತರು ಮತ್ತು ಆದಿವಾಸಿಗಳನ್ನು ಶೋಷಣೆ ಮಾಡುತ್ತಿದ್ದಾರೆ. ದಲಿತರನ್ನು ಸಾರ್ವಜನಿಕವಾಗಿ ಥಳಿಸಿದ ಉನಾ ಘಟನೆಯು ಪ್ರತಿಯೊಬ್ಬ ಭಾರತೀಯನ ಆತ್ಮಸಾಕ್ಷಿಯನ್ನು ಅಲ್ಲಾಡಿಸಿತು. ಆದಿವಾಸಿಗಳ ಹಕ್ಕುಗಳನ್ನು ಕಸಿಯಲಾಗಿದೆ, ಗುಜರಾತ್‍ನಲ್ಲಿ ಪಿಇಎಸ್‍ಎ ಜಾರಿಗೆ ತಂದಿಲ್ಲ ಎಂದು ಖರ್ಗೆ ಆಕ್ಷೇಪಿಸಿದ್ದಾರೆ.
ಬಿಜೆಪಿ-ಆರ್‍ಎಸ್‍ಎಸ್‍ನ ಮಹಿಳಾ ವಿರೋಧಿ ಮನಸ್ಥಿತಿಯು ಗುಜರಾತ್‍ನ ಅರ್ಧದಷ್ಟು ಜನಸಂಖ್ಯೆಯ ಹಕ್ಕುಗಳನ್ನು ಕಸಿದುಕೊಂಡಿದೆ. 15-49 ವರ್ಷ ವಯಸ್ಸಿನ ಶೇ.55 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳ ನೂರಕ್ಕೆ ನೂರರಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ಕರೋನಾ ಅವಧಿಯಲ್ಲಿ ಗುಜರಾತ್ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದೆ.
ಮಲ್ಲಿಕ್ ನನ್ನನ್ನು ಗುಲಾಮನಂತೆ ನಡೆಸಿಕೊಂಡಿದ್ದ: ಅಕ್ರಂ
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಗ್ರಾಮೀಣ ಭಾಗದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ.90ರಷ್ಟು ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ರೇಡಿಯೋ ಥೇರಪಿಸ್ಟ್ ಹುದ್ದೆಗಳು ಶೇ.98ರಷ್ಟು ಖಾಲಿ ಇದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.42ರಷ್ಟು ವೈದ್ಯರಿಲ್ಲ.
ಬಿಜೆಪಿ ಸರ್ಕಾರ ಜಾರಿಗೊಳಿಸಿದ ತಪ್ಪು ಖಾಸಗೀಕರಣ ನೀತಿ ಗುಜರಾತ್‍ನ ಲಕ್ಷಾಂತರ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ಅಸಹನೀಯವಾಗಿಸಿದೆ ಎಂದು ವಿವರಿಸಿದ್ದಾರೆ.
ಗುಜರಾತ್‍ನ ಶಿಕ್ಷಣದ ಮಟ್ಟ ಕುಸಿದು ಹೋಗಿದೆ. ಬಿಜೆಪಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದೆ. ಸುಮಾರು 28 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 700 ಪ್ರಾಥಮಿಕ ಶಾಲೆಗಳನ್ನು ಒಬ್ಬ ಶಿಕ್ಷಕರೇ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ ಬಿಜೆಪಿ ಆಡಳಿತ 7 ಕೋಟಿ ಗುಜರಾತಿಗಳ ಮೇಲೆ 4.5 ಲಕ್ಷ ಕೋಟಿ ಸಾಲವನ್ನು ಹೇರಿದೆ. ಗುಜರಾತ್ ಸಾಲದ ಸುಳಿಯಲ್ಲಿ ಸಿಲುಕುತ್ತಿದೆ ಎಂದು ಸಿಎಜಿ ಎಚ್ಚರಿಕೆ ನೀಡಿದೆ.
ಬಿಜೆಪಿ ಗುಜರಾತ್‍ನಲ್ಲಿ ಜನರ ಮೇಲೆ ಆರ್ಥಿಕ ಹೊರೆ ಏರುವುದು ಮತ್ತು ಸಾಮಾಜಿಕ ದ್ವೇಷ ಬಿತ್ತುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಎಷ್ಟು ರೌಡಿಶೀಟರ್ ಇದ್ದಾರೆ ಲೆಕ್ಕ ಹಾಕಿಕೊಳ್ಳಿ : ಸಿಎಂ ಬೊಮ್ಮಾಯಿ
27 ವರ್ಷಗಳ ಬಿಜೆಪಿಯ ದುರಾಡಳಿತವನ್ನು ಬೇರು ಸಮೇತ ಕಿತ್ತೊಗೆಯಲು ಈಗ ಸಮಯ ಬಂದಿದೆ. ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಮೊರಾರ್ಜಿ ದೇಸಾಯಿ, ಬಲವಂತರಾಯ್ ಮೆಹ್ತಾ, ಚಿಮನ್‍ಭಾಯ್ ಪಟೇಲ್ ಅವರ ಗುಜರಾತ್ ಅನ್ನು ಮರು ನಿರ್ಮಾಣ ಮಾಡುವ ಸಮಯ ಈಗ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ, ಗುಜರಾತಿನ ಜನರಿಗೆ ಮರಳಿ ಸಂತಸ ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Gujarat, Elections, Mallikarjun Kharge, Congress,