ಬೆಂಗಳೂರು, ಜನವರಿ 31, 2022: ತಾಯ್ತನಕ್ಕೆ ಹಾತೊರೆಯುತ್ತಿದ್ದರೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದೇ ಪರಿತಪಿಸುತ್ತಿದ್ದ ಸಾವಿರಾರು ಮಹಿಳೆಯರ ಬಾಳಿನಲ್ಲಿ ಬಸವನಗುಡಿಯ ಗುಣಶೀಲ ಫರ್ಟಿಲಿಟಿ ಸೆಂಟರ್ ಹಲವಾರು ವರ್ಷಗಳಿಂದ ಭರವಸೆಯ ಬೆಳಕಾಗಿದೆ. ಬಂಜೆತನಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಗುಣಶೀಲ ಫರ್ಟಿಲಿಟಿ ಸೆಂಟರ್, ಸ್ಥೂಲಕಾಯ ಅಸ್ವಸ್ಥತೆಯಿಂದ ಉಂಟಾಗುವ ಬಂಜೆತನದಿಂದ ಬಳಲುತ್ತಿರುವ ಸ್ತ್ರೀಯರಿಗೂ ಆಶಾಕಿರಣವಾಗಿದೆ.
ಸ್ಥೂಲಕಾಯ ಅಸ್ವಸ್ಥತೆಯಿಂದ ಉಂಟಾಗುವ ಬಂಜೆತನದ ಪ್ರಕರಣಗಳು ಗುಣಶೀಲ ಫರ್ಟಿಲಿಟಿ ಸೆಂಟರ್ ಗೆ ಹೆಚ್ಚಾಗಿ ಬರುತ್ತಿವೆ. ಸ್ಥೂಲಕಾಯ ಅಸ್ವಸ್ಥತೆಗೂ, ಬಂಜೆತನಕ್ಕೂ ನಿಕಟ ನಂಟಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ನಡೆಯುವ ತೂಕ ಇಳಿಕೆ ಮತ್ತು ಡಯಟ್ ಕಾರ್ಯಕ್ರಮಗಳ ಕಠಿಣ ಪಾಲನೆ ಹಾಗು ಆರೋಗ್ಯಕರ ಜೀವನ ಪದ್ಧತಿ ರೂಡಿಯ ಹೊರತಾಗಿಯೂ ಸ್ಥೂಲಕಾಯವುಳ್ಳ ಮಹಿಳೆಯರು ತಮ್ಮ ತೂಕ ಇಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
ಏನಿದು ಸ್ಥೂಲಕಾಯ ಅಸ್ವಸ್ಥತೆ (MORBID OBESITY)?
ವ್ಯಕ್ತಿಯೊಬ್ಬರ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 37ಕ್ಕಿಂತ ಹೆಚ್ಚಾದರೆ (23-25 ಸಾಮಾನ್ಯ ಬಿಎಂಐ) ಅದನ್ನು ಸ್ಥೂಲಕಾಯ ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದಾಗಿದ್ದು, ಮಹಿಳೆಯರ ಸಂತಾನೋತ್ಪತ್ತಿಯ ಮೇಲೂ ದುಷ್ಪರಿಣಾಮ ಬೀರಬಹುದು. ಸ್ಥೂಲಕಾಯ ಅಸ್ವಸ್ಥತೆಯಿಂದ ಬಂಜೆತನ ಹೊಂದಿರುವ ಮಹಿಳೆಯರು ಔಷದೋಪಾಚಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದೆ ಇರುವುದರಿಂದ, ಅವರಿಗೆ ಐವಿಎಫ್ ಮುಂತಾದ ಮಾರ್ಗಗಳನ್ನು ಬಳಸಿ ಚಿಕಿತ್ಸೆ ನೀಡುವುದು ಬಹುತೇಕ ಪ್ರಕರಣಗಳಲ್ಲಿ ಯಶಸ್ವಿಯಾಗುವುದಿಲ್ಲ. ಹಾಗಾದರೆ, ಈ ಸಮಸ್ಯೆಗೆ ಸೂಕ್ತ ವೈದ್ಯಕೀಯ ಪರಿಹಾರವಾದರೂ ಏನು?
“ಸ್ಥೂಲಕಾಯ ಅಸ್ವಸ್ಥತೆಯಿಂದ ಉಂಟಾದ ಬಂಜೆತನದಿಂದ ಬಳಲುವ ಮಹಿಳೆಯರು ಸಾಕಷ್ಟು ತೂಕ ಕಳೆದುಕೊಳ್ಳಲು ಸಾಧ್ಯವಾಗದಿದ್ದರೆ ಅಥವಾ ಕಳೆದುಕೊಂಡ ತೂಕವನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದ ಸಂದರ್ಭಗಳಲ್ಲಿ, ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಗುವುದು,” ಎನ್ನುತ್ತಾರೆ ಗುಣಶೀಲ ಫರ್ಟಿಲಿಟಿ ಸೆಂಟರ್ ನ ಸರ್ಜಿಕಲ್ ಗ್ಯಾಸ್ಟ್ರೋಎಂಟೆರೊಲೊಜಿಸ್ಟ್ ಡಾ. ರಾಜಶೇಖರ್ ನಾಯಕ್.
ಬಂಜೆತನಕ್ಕೆ ಪಾಲಿಸಿಸ್ಟಿಕ್ ಓವರೀಸ್ (ಪಿಸಿಒ) ಸಾಮಾನ್ಯ ಕಾರಣಗಳಲ್ಲೊಂದಾಗಿದ್ದು, ಇದರಿಂದ ಬಳಲುವ ರೋಗಿಗಳಿಗೆ ಇರುವ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ತೂಕ ಇಳಿಕೆ. ಪಿಸಿಒಗೆ ಒಳಗಾದವರ ಪೈಕಿ ಸುಮಾರು ಅರ್ಧದಷ್ಟು ಮಂದಿ ಸ್ಥೂಲಕಾಯಿಗಳಾಗಿರುತ್ತಾರೆ, ಎಂದು ಅವರು ವಿವರಿಸುತ್ತಾರೆ.
“ಇಂತಹವರಲ್ಲಿ ಅಧಿಕ ಇನ್ಸುಲಿನ್, ಗ್ಲೂಕೋಸ್ ಸಹಿಷ್ಟುತೆಯಲ್ಲಿ ಉಂಟಾಗುವ ಏರುಪೇರು, ಮುಂತಾದ ಸಮಸ್ಯೆಗಳಿರುತ್ತವೆ. ಅಲ್ಲದೇ, ಮಹಿಳೆಯರಲ್ಲಿ ಅಧಿಕ ಮಟ್ಟದ ಟೆಸ್ಟೋಸ್ಟೆರೋನ್ ಉತ್ಪತ್ತಿಯಾಗುತ್ತದೆ. ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗುವುದರಿಂದ ಅನಿಯಮಿತ ಋತುಸ್ರಾವಕ್ಕೆ ದಾರಿಯಾಗಿ ಅಂಡೋತ್ಪತ್ತಿಯನ್ನು ತಡೆಯುತ್ತದೆ,” ಎಂದು ಡಾ. ನಾಯಕ್ ಹೇಳುತ್ತಾರೆ.
ಬೇರಿಯಾಟ್ರಿಕ್ ಸರ್ಜರಿಯಿಂದಾಗುವ ತೂಕ ಇಳಿಕೆ ಈ ಎಲ್ಲ ವ್ಯತ್ಯಾಸಗಳನ್ನು ಸರಿದೂಗಿಸಿ ಸಹಜ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅತಿಯಾದ ತೂಕದಿಂದ ಗರ್ಭ ಧರಿಸಲು ಸಾಧ್ಯವಾಗದಿದ್ದ ಮಹಿಳೆಯರ ಬದುಕಿನಲ್ಲಿ ಯಶಸ್ವಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮೂಲಕ ಗುಣಶೀಲ ಫರ್ಟಿಲಿಟಿ ಸೆಂಟರ್ ಹೇಗೆ ಸಂತಸವನ್ನು ಮರುಕಳಿಸಿತು ಎಂದು ವಿವರಿಸುತ್ತಾ, “ನಮ್ಮಲ್ಲಿ ಈವರೆಗೆ ಸ್ಥೂಲಕಾಯ ಅಸ್ವಸ್ಥತೆಯಿಂದ ಉಂಟಾದ ಬಂಜೆತನದಿಂದ ಪರಿತಪಿಸುತ್ತಿದ್ದ 28 ಮಹಿಳೆಯರಿಗೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಮಹಿಳೆಯರು ಗರ್ಭ ಧರಿಸಲು ಹಲವು ವರ್ಷಗಳಿಂದ ಪ್ರಯತ್ನಿಸಿ, ಬೇರೆ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗೊಳಪಟ್ಟು ವಿಫಲರಾಗಿದ್ದರು. ನಮ್ಮ ಆಸ್ಪತ್ರೆಗೆ ಬಂದಾಗ ಐವಿಎಫ್ ಚಿಕಿತ್ಸೆಗೆ ಒಳಗಾಗಲೂ ಅವರು ಸಿದ್ಧರಿದ್ದರು. ಆದರೆ, ಇಂತಹ ರೋಗಿಗಳಲ್ಲಿ ಐವಿಎಫ್ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಕಡಿಮೆ ಇರುವುದರಿಂದ, ಮೊದಲಿಗೇ ಐವಿಎಫ್ ಚಿಕಿತ್ಸೆಯ ಸಲಹೆ ನೀಡದೆ ತೂಕ ಇಳಿಕೆ ಮಾಡಿ ನಂತರ ಗರ್ಭಧಾರಣೆಗೆ ಪ್ರಯತ್ನಿಸಲು ಸಲಹೆ ನೀಡಲಾಯಿತು. ಅವರಿಗೆ ಗರ್ಭವಾಸ್ಥೆಯಲ್ಲಿ ಹೆಚ್ಚಿನ ತೊಂದರೆ ಆಗುವುದಿಲ್ಲ ಮತ್ತು ಮುಂದೆ ಎರಡನೇ ಮಗು ಮಾಡಿಕೊಳ್ಳುವ ಇಚ್ಛೆಯಿದ್ದರೆ ಐವಿಎಫ್ ನ ಅಗತ್ಯವಿರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಲಾಯಿತು,” ಎಂದು ಡಾ. ನಾಯಕ್ ಹೇಳುತ್ತಾರೆ.
“ಈ ಪೈಕಿ 14 ಮಹಿಳೆಯರು ಸಹಜವಾಗಿ ಗರ್ಭಧರಿಸಿದರೆ, ನಾಲ್ಕು ಮಂದಿ ವೈದ್ಯಕೀಯ ನೆರವಿನಿಂದ ಗರ್ಭ ಧರಿಸುವುದು ಸಾಧ್ಯವಾಯಿತು. ಇವರೆಲ್ಲರೂ ಸುಗಮ ಪ್ರಸವಪೂರ್ವ ಅವಧಿ ಪೂರೈಸಿ, ಆರೋಗ್ಯಕರ ಶಿಶುಗಳಗೆ ಜನ್ಮ ನೀಡಿದ್ದಾರೆ,” ಎನ್ನುತ್ತಾರೆ ಡಾ. ರಾಜಶೇಖರ್ ನಾಯಕ್.
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಮುನ್ನ ತಿಳಿದಿರಬೇಕಾದ ವಿಷಯಗಳು
ಬೇರಿಯಾಟ್ರಿಕ್ ತಂಡವು ಹಲವು ಸುತ್ತಿನ ಆಪ್ತ ಸಮಾಲೋಚನೆಯನ್ನು ನಡೆಸಿ ರೋಗಿಗೆ ಶಸ್ತ್ರಚಿಕಿತ್ಸೆ ಪೂರ್ವ ಮತ್ತು ನಂತರದ ಸಿದ್ಧತೆ ಮತ್ತು ಆರೈಕೆಗಳು, ಹಾಗು ಆಸ್ಪತ್ರೆಗೆ ನಿಯಮಿತ ಭೇಟಿಯ ಕುರಿತು ವಿವರಿಸುತ್ತಾರೆ.
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ನಂತರ ಕಡ್ಡಾಯವಾಗಿ ಕನಿಷ್ಠ 12 ತಿಂಗಳುಗಳ ಅವಧಿಯಲ್ಲಿ ಗರ್ಭ ಧರಿಸದಂತೆ ಸೂಚಿಸಲಾಗುತ್ತದೆ.
ಗರ್ಭಧಾರಣೆಯಾದ ನಂತರ ಪ್ರಸವದವರೆಗೆ ಬೇರಿಯಾಟ್ರಿಕ್ ತಂಡ ಮತ್ತು ಪ್ರಸೂತಿ ವೈದ್ಯರಿಂದ ನಿರಂತರ ಪರಿಶೀಲನೆ.
ಸಹಜವಾಗಿ ಗರ್ಭಧಾರಣೆ ಸಾಧ್ಯವಾಗದಿದ್ದ ಪಕ್ಷದಲ್ಲೂ ವೈದ್ಯಕೀಯ ನೆರವು ಆಧಾರಿತ ಗರ್ಭಧಾರಣೆಯ ಸಾಧ್ಯತೆ ಹೆಚ್ಚು.
ಸ್ಥೂಲಕಾಯ ಅಸ್ವಸ್ಥತೆಯಿಂದ ಉಂಟಾದ ಬಂಜೆತನ ನಿವಾರಣೆಯಲ್ಲಿ ತೂಕ ಇಳಿಕೆ ಬಹಳ ಮುಖ್ಯ ಎಂಬುದನ್ನು ಮನಗಾಣಬೇಕು. ಇದು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ತಾಯಿ ಮತ್ತು ಮಗುವಿಗೆ ಆಗಬಹುದಾದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಯರಿಗೆ ಜನಿಸಿದ ಮಕ್ಕಳಿಗೆ ಯಾವುದೇ ಪ್ರತಿಕೂಲ ಪರಿಣಾಮವಾದ ಬಗ್ಗೆ ವರದಿಯಿಲ್ಲ.
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಮಸ್ಯೆಗಳಿಂದ ಹೊರತಲ್ಲ. ಆದರೆ, ಅದರಿಂದಾಗುವ ಅನುಕೂಲಗಳು ಸಮಸ್ಯೆಗಳಿಗಿಂತ ಹೆಚ್ಚಿದ್ದಾಗ ರೋಗಿಗಳಿಗೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.
