ಪೊಲೀಸರ ಮೇಲೆ ಹಲ್ಲೆ ಮಾಡಿದ ರೌಡಿ ಕಾಲಿಗೆ ಗುಂಡೇಟು

Spread the love

ಬೆಂಗಳೂರು,ಫೆ.9- ಕೊಲೆ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಆತ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಠಾಣೆ ಪೊಲೀಸರು ಹಾರಿಸಿದ ಗುಂಡು ತಗುಲಿ ಸಿಕ್ಕಿಬಿದ್ದಿದ್ದಾನೆ. ಸಂತೋಷ್(22) ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ. ಈತ ರಾಜಗೋಪಾಲನಗರ ಠಾಣೆಯ ರೌಡಿ ಶೀಟರ್. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶ್ರೀನಿವಾಸ್ ಅಲಿಯಾಸ್ ಸೀನ ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂತೋಷ್ ತಲೆ ಮರೆಸಿಕೊಂಡಿದ್ದನು. ಪೊಲೀಸರು ಈತನ ಬಂಧನಕ್ಕಾಗಿ ಬಲೆ ಬೀಸಿದ್ದರು.

ಇಂದು ಬೆಳಗಿನ ಜಾವ 5.45ರ ಸುಮಾರಿನಲ್ಲಿ ಆರೋಪಿ ಸಂತೋಷ್ ಜಿಕೆಡಬ್ಲ್ಯೂ ಲೇಔಟ್‍ನಲ್ಲಿ ಇರುವ ಬಗ್ಗೆ ರಾಜಗೋಪಾಲ ನಗರ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಸಬ್‍ಇನ್‍ಸ್ಪೆಕ್ಟರ್ ಹನುಮಂತ ಹಾದಿಮನಿ ಅವರು ಹೆಡ್‍ಕಾನ್‍ಸ್ಟೇಬಲ್ ಸಿದ್ದರಾಮ್ ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಹಿಡಿಯಲು ಹೋದ ಹೆಡ್‍ಕಾನ್‍ಸ್ಟೆಬಲ್ ಸಿದ್ದರಾಮ್ ಅವರ ಮೇಲೆ ಆರೋಪಿ ಸಂತೋಷ್ ಲಾಂಗ್‍ನಿಂದ ಹಲ್ಲೆ ನಡೆಸಿದ್ದಾನೆ.

ತಕ್ಷಣ ಹನುಮಂತ ಹಾದಿಮನಿಯವರು ಆರೋಪಿಗೆ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಸಬ್‍ಇನ್‍ಸ್ಪೆಕ್ಟರ್ ಮಾತಿಗೆ ಕಿವಿಗೊಡದೆ ಆರೋಪಿ ಸಂತೋಷ್ ಮತ್ತೆ ಹಲ್ಲೆಗೆ ಮುಂದಾದಾಗ ತಕ್ಷಣ ಆತ್ಮರಕ್ಷಣೆಗಾಗಿ ಹನುಮಂತ ಹಾದಿಮನಿ ಅವರು ಹಾರಿಸಿದ ಗುಂಡು ಸಂತೋಷ್‍ನ ಬಲಗಾಲಿಗೆ ತಗುಲಿದೆ.

ಗುಂಡೇಟಿನಿಂದ ಕುಸಿದು ಬಿದ್ದ ಆರೋಪಿ ಸಂತೋಷ್‍ನನ್ನು ಪೊಲೀಸರು ಸುತ್ತುವರೆದು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಡ್‍ಕಾನ್‍ಸ್ಟೇಬಲ್ ಸಿದ್ದರಾಮ್ ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

# 10 ಪ್ರಕರಣ:
ರಾಜಗೋಪಾಲ ನಗರಠಾಣೆಯ ರೌಡಿಶೀಟರ್ ಆಗಿರುವ ಆರೋಪಿ ಸಂತೋಷ್ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಕಳ್ಳತನ ಸೇರಿ 8 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಬ್ಯಾಡರಹಳ್ಳಿ ಮತ್ತು ನಂದಿನಿ ಲೇಔಟ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

Facebook Comments