ಕೊಲೆ ಆರೋಪಿಗಳಿಗೆ ಗುಂಡೇಟು

ಬೆಂಗಳೂರು,ಜ.20- ಕೊಲೆ ಮತ್ತು ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದಾಗ ಭಾರತೀನಗರ ಠಾಣೆ ಇನ್‍ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡುಗಳು ಆರೋಪಿಗಳಿಬ್ಬರ ಕಾಲಿಗೆ ತಗುಲಿ ಗಾಯಗೊಂಡಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಪರ್ವೇಜ್ ಅಹಮದ್ ಗಾಯಗೊಂಡ ಕೊಲೆ ಆರೋಪಿಗಳಾಗಿದ್ದು, ಇವರಿಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಪುಲಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.16ರಂದು ಅಬೂ ಸೂಫಿಯಾನ್(27) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಪುಲಿಕೇಶಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿ ಮೊಹಮ್ಮದ್ ತಂಜೀಲ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಈ ಸಂದರ್ಭದಲ್ಲಿ ಶಿವಾಜಿನಗರದ ನಿವಾಸಿ ಅಬ್ದುಲ್ ಮತೀನ್ ಎಂಬಾತನನ್ನು ಶಿವಾಜಿನಗರದ ಬಂಡಿಮಠದ ಬಳಿಯಿಂದ ಸ್ಯಾಂಟ್ರೋ ಕಾರಿನಲ್ಲಿ ಅಪಹರಿಸಿ ಬಾಗಲೂರು- ಹೆಣ್ಣೂರು ಮುಖ್ಯರಸ್ತೆಯ ನಿರ್ಜನ ಪ್ರದೇಶದಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದನು.

ಈ ಬಗ್ಗೆ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶಿವಾಜಿನಗರ ಹಾಗೂ ಭಾರತಿನಗರ ಠಾಣೆ ಇನ್‍ಸ್ಪೆಕ್ಟರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರಿಗೆ , ಆರೋಪಿಗಳಾದ ಮೊಹಮದ್ ರಿಜ್ವಾನ್ ಮತ್ತು ಪರ್ವೇಜ್ ಅಹಮದ್ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಕಲಪಲ್ಲಿ ಸ್ಮಶಾನದ ರಸ್ತೆಯಲ್ಲಿ ಹೋಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಖಚಿತ ಮಾಹಿತಿ ಮೇರೆಗೆ ಭಾರತಿನಗರ ಠಾಣೆ ಇನ್‍ಸ್ಪೆಕ್ಟರ್ ರಮೇಶ್ ಅವರು ಸಿಬ್ಬಂದಿಗಳೊಂದಿಗೆ ತೆರಳಿದಾಗ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಇನ್‍ಸ್ಪೆಕ್ಟರ್ ರಮೇಶ್ ಅವರು ಆರೋಪಿಗಳಿಗೆ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದರೂ ಇವರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡುಗಳು ಆರೋಪಿಗಳಿಬ್ಬರ ಕಾಲುಗಳಿಗೂ ತಗುಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಇವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತನ್ನ ಅತ್ತಿಗೆಯೊಂದಿಗೆ ಅಬ್ದುಲ್ ಮತೀನ್ ಅಕ್ರಮ ಸಂಬಂಧ ಹೊಂದಿದ್ದರಿಂದ ಕೊಲೆ ಮಾಡಿದ್ದಾಗಿ ಆರೋಪಿ ಮೊಹಮ್ಮದ್ ರಿಜ್ವಾನ್ ಬಾಯ್ಬಿಟ್ಟಿದ್ದಾನೆ.

ಅಬೂ ಸೂಫಿಯನ್ ತನ್ನ ತಂಗಿಯನ್ನು ಅಬ್ದುಲ್ ಮತೀನ್‍ನೊಂದಿಗೆ ಮದುವೆ ಮಾಡಿಸಲು ಸಹಕರಿಸಿದ ಹಿನ್ನೆಲೆಯಲ್ಲಿ ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಜ.16ರಂದು ಸಂಜೆ ಶಿವಾಜಿನಗರದಿಂದ ಅಬ್ದುಲ್‍ನನ್ನು ಅಪಹರಿಸಿಕೊಂಡು ಬಾಗಲೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಅಲ್ಲದೆ ಪುಲಕೇಶಿನಗರದ ಎಂಎಂರಸ್ತೆಯ ಇಂಡಿಯನ್ ಚಾಯ್ ಪಾಯಿಂಟ್ ಮುಂಭಾಗ ಅಬೂ ಸೂಫಿಯನ್‍ನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಎರಡೂ ಪ್ರಕರಣದಲ್ಲಿ ಗುಂಡೇಟನಿಂದ ಗಾಯಗೊಂಡಿರುವ ಮೊಹಮದ್ ರಿಜ್ವಾನ್,ಪರ್ವೇಜ್ ಸೇರಿ ಮೊಹಮ್ಮದ್ ತಂಜಿತ್, ಮೊಹಮದ್ ಸಫಾನ್, ಸಯ್ಯದ್ ಅಲಿ, ಯಾಸಿನ್ ಖಾನ್ ಮತ್ತು ಶಾಹಿದ್‍ನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪರ ಪೊಲೀಸ್ ಆಯುಕ್ತ ಮುರುಗನ್, ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಪುಲಿಕೇಶನಗರ ಉಪವಿಭಾಗದ ಎಸಿಪಿ ತಬರಕ್ ಫಾತೀಮಾ ನೇತೃತ್ವದಲ್ಲಿ ಶಿವಾಜಿನಗರ ಠಾಣೆ ಇನ್‍ಸ್ಪೆಕ್ಟರ್ ಸಿದ್ದರಾಜು, ಭಾರತಿನಗರ ಠಾಣೆ ಇನ್‍ಸ್ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.