ಕಾಂಗ್ರೆಸ್ ನಾಯಕರು ಖಾಲಿ ಡಬ್ಬಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ : ಎಚ್.ವಿಶ್ವನಾಥ್

Social Share

ಬೆಂಗಳೂರು,ಆ.10- ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮ ದಿನಾಚರಣೆ ನಂತರ ಕಾಂಗ್ರೆಸ್ ನಾಯಕರು ಬಹಳ ಆತುರದಲ್ಲಿದ್ದಾರೆ. ಈಗ ಅವರು ಖಾಲಿ ಡಬ್ಬಗಳನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಇದೇ ಸಂದರ್ಭದಲ್ಲಿ ಸಿಎಂ ಬದಲಾವಣೆ ಎಂಬ ಕಾಂಗ್ರೆಸ್ ಟೀಕೆಗೆ ಟಾಂಗ್ ನೀಡಿದ ಶಾಸಕ ಎಚ್.ವಿಶ್ವನಾಥ್, ಕಾಂಗ್ರೆಸ್‍ನವರು ಬಹಳ ಅವಸರದವರು. ದಾವಣಗೆರೆ ಸಮಾವೇಶ ಆದ ಮೇಲೆ ಜನ ಎಲ್ಲ ಡಬ್ಬಗಳನ್ನು ತುಂಬುತ್ತಾರೆ ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

ಎಲ್ಲರಿಗೂ ಬೈಯೋದಕ್ಕೆ ಶುರು ಮಾಡಿದ್ದಾರೆ. ದುರ್ಯೋಧನ, ದುಶ್ಯಾಸನ ನಡವಳಿಗೆ ಬಹಳ ದಿನ ಉಳಿಯಲ್ಲ. ಕಾಂಗ್ರೆಸ್‍ನಲ್ಲಿ ಕೆಲವರು ಈಗಾಗಲೇ ಮಂತ್ರಿಗಳು ಆಗಿದ್ದಾರೆ. ಇಲಾಖೆ ಕೂಡ ಹಂಚಿಕೊಂಡಿದ್ದಾರೆ ಎಂದು ಟೀಕಿಸಿದರು.

ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಶ್ಯಾಡೋ ಸಿಎಂ ಆಗಿರಬೇಕು. ಆದರೆ ನಿನ್ನ ಜವಾಬ್ದಾರಿ ನೀನು ನಿಭಾಯಿಸುತ್ತಿಲ್ಲ. ಬೇರೆಯವರ ಜವಾಬ್ದಾರಿ ಬಗ್ಗೆ ಟೀಕೆ ಮಾಡುವ ಅಕಾರ ಏನಿದೆ? ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ವಿರೋಧ ಪಕ್ಷವಾಗಿ, ರಾಜ್ಯದಲ್ಲಿ ಮಳೆಯಿಂದ ಜೀವ,ಬೆಳೆ ಹಾನಿಯಾಗ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಕೆಲಸಕ್ಕೆ ಬಾರದ ಸಮಾವೇಶ ಮಾಡಿಕೊಂಡು ರಾಜಕೀಯ ಮಾತನಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಅಂದರೆ ಮುಖ್ಯಮಂತ್ರಿಯ ಛಾಯೆ. ನಿಮ್ಮ ಜವಾಬ್ದಾರಿ ನೀವು ನಿಭಾಯಿಸಬೇಕು. ನಿಮ್ಮ ಜವಾಬ್ದಾರಿ ನಿಭಾಯಿಸದೆ, ಬೇರೆ ಅವರ ಜವಾಬ್ದಾರಿ ಬಗ್ಗೆ ಟೀಕೆ ಯಾಕೆ ಮಾಡ್ತೀರಾ. ಮೊದಲು ನಿಮ್ಮ ಕೆಲಸ ನೀವು ಮಾಡಿ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ಬಗ್ಗೆ ನಾವ್ಯಾರು ಹೇಳೋಕೆ? ಬೊಮ್ಮಾಯಿ ಅವರ ಪಾಡಿಗೆ ಅವರು ಕೆಲಸ ಮಾಡ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ತಮ್ಮ ಪುತ್ರ ಪೂರ್ವಜ್ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ನಿಜ. ನನ್ನ ಮಗನಿಗೆ 45 ವರ್ಷ ಆಗಿದೆ. ಅವರ ದಾರಿ ಅವರು ಹುಡಿಕಿಕೊಂಡು ಹೋಗುತ್ತಾರೆ. ನನಗೆ 75 ವರ್ಷ ಆಗಿದೆ. ಈಗಲೂ ನನ್ನ ಮಾತು ಕೇಳು ಅಂದರೆ ಆಗುತ್ತದೆಯೇ?, ಮಕ್ಕಳಿಗೆ ಸ್ವಾತಂತ್ರ್ಯ ಕೊಡಲಿಲ್ಲ ಅಂದರೆ ಹೇಗೆ, ಅವನ ದಾರಿ ಅವನು ಹುಡುಕಿಕೊಂಡು ಹೋಗಿದ್ದಾರೆ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಟುಂಬ ರಾಜಕಾರಣಕ್ಕೆ ವಿರೋಧ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳು, ಸೊಸೆ, ಮೊಮ್ಮಕ್ಕಳು ಎಲ್ಲರೂ ಇಲ್ಲವೇ. ಅದರ ಬಗ್ಗೆ ಯಾಕೆ ಯಾರು ಕೇಳುವುದಿಲ್ಲ. ಮಗ ಕಾಂಗ್ರೆಸ್‍ಗೆ ಹೋಗೋದು ಬೇರೆ, ನಾನು ಕಾಂಗ್ರೆಸ್ ನಡುವಳಿಕೆ ಟೀಕೆ ಮಾಡೋದು ಬೇರೆ. ನಾವು ಸುಡಗಾಡು ಸಿದ್ಧರು ಇದ್ದ ಹಾಗೆ. ಎಲ್ಲವನ್ನು ಹೇಳುತ್ತೇವೆ. ಕಾಂಗ್ರೆಸ್ ಆಗಿರಲಿ ಬಿಜೆಪಿ ಆಗಿರಲಿ ಎಲ್ಲದರ ನಡುವಳಿಕೆಗಳನ್ನು ಟೀಕೆ ಮಾಡುತ್ತೇವೆ. ಅದು ಬೇರೆ ಆತ ಕಾಂಗ್ರೆಸ್‍ಗೆ ಸೇರೋದು ಬೇರೆ ಎಂದು ತಿಳಿಸಿದರು.

ಇದೇ ವೇಳೆ ಕಾಂಗ್ರೆಸ್ ಟ್ವೀಟ್‍ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಅವರು ತುಂಬಾ ಅವಸರದಲ್ಲಿ ಇದ್ದಾರೆ. ಸಿಎಂ ಆಗೇ ಬಿಟ್ಟೆ ಅಂತ ಇದ್ದಾರೆ. ದಾವಣಗೆರೆ ಸಮಾವೇಶ ಆದ ಮೇಲೆ ರಾಜ್ಯದ ಜನರಿಂದ ಮತದ ಡಬ್ಬ ನಮಗೆ ತುಂಬುತ್ತೆ ಅಂತ ಭ್ರಮೆಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್‍ನಲ್ಲಿ ಕೆಲವರು ಮಂತ್ರಿಗಳು ಆಗಿ ಬಿಟ್ಟಿದ್ದಾರೆ. ಖಾತೆಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಏಕವಚನದಲ್ಲಿ ಮಾತಾಡುತ್ತಾರೆ. ದುಶ್ಯಾಸನ, ದುರ್ಯೋಧನನ ದುರಹಂಕಾರ ಜಾಸ್ತಿ ದಿನ ನಿಲ್ಲೊಲ್ಲ ಎಂದು ಟೀಕಿಸಿದರು.

ಸಿಎಂ ಬಗ್ಗೆ ಹೈಕಮಾಂಡ್ ಯೋಚನೆ ಮಾಡುತ್ತದೆ. ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ಏನ್ ತೀರ್ಮಾನ ಮಾಡಿದರೂ, ನಾವು ಅದಕ್ಕೆ ಬದ್ಧವಾಗಿ ಇರುತ್ತೇವೆ. ಅಕೃತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಏನ್ ಕೆಲಸ ಮಾಡಬೇಕೋ ಅದನ್ನ ಮಾಡುತ್ತಿಲ್ಲ. ಮಳೆ ಹಾನಿ ಆಗುತ್ತಿದೆ? ಸಾವು, ನೋವು ಆಗುತ್ತಿದೆ. ಇದರ ಬಗ್ಗೆ ವಿಪಕ್ಷ ನಾಯಕರು ಮಾಡುತ್ತಿಲ್ಲ ಎಂದು ಕಿಡಿಕಾರಿದರು.

Articles You Might Like

Share This Article