ಶಿರಾ, ಆರ್.ಆರ್.ನಗರದಲ್ಲಿ ಬಿಜೆಪಿ ಗೆಲುವು ಖಚಿತ : ಎಚ್.ವಿಶ್ವನಾಥ್

ಹುಣಸೂರು, ಅ.19- ಉಪ ಚುನಾವಣೆಯಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಗೆಲ್ಲುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಿರಾ ಕ್ಷೇತ್ರ ಉಳಿಸಿಕೊಳ್ಳಲು ಅಲ್ಪಸಂಖ್ಯಾತರ ಓಲೈಕೆ ಮಾಡಿ ದಿಕ್ಕು ತಪ್ಪಿಸುವ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಡ್ಯ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪತನ ಆರಂಭವಾಗಿದೆ. ನಂತರದ ಪ್ರತಿ ಚುನಾವಣೆಯಲ್ಲೂ ಪತನದ ಓಟ ಮುಂದುವರೆದಿದೆ. ಇದಕ್ಕೆ ಕಾರ್ಯಕರ್ತರು ಕಾರಣರಲ್ಲ, ಆ ಪಕ್ಷದ ನಾಯಕರು. ಇದನ್ನು ಪ್ರತಿಭಟಿಸಿ ಜೆಡಿಎಸ್‍ನ ಚುನಾಯಿತ ಜನಪ್ರತಿನಿಧಿಗಳು ದಂಗೆ ಎದ್ದು ಹೊರ ಬಂದರು ಎಂದರು.

ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಅವರ ಸೋಲಿಗೆ ಮೂಲ ಕಾರಣ ಸಮ್ಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಕಾರ್ಯಕರ್ತರ ಜೊತೆ ನಡೆದುಕೊಂಡ ರೀತಿ. ಈಗಲೂ ಆ ನೋವು ಕಾರ್ಯಕರ್ತರಿಂದ ಮಾಸಿಲ್ಲ, ಹೀಗಾಗಿ ಇಂದಿಗೂ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಪಕ್ಷದ ಮುಖಂಡರು ಬಂದಿಲ್ಲ ಎಂದು ಲೇವಡಿ ಮಾಡಿದರು.
ನಗರ ಘಟಕದ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ನಾಗರಾಜಪ್ಪ, ಎ.ಪಿ.ಸ್ವಾಮಿ, ವಿವೇಕ್, ಗಣಪತಿ, ಕಮಲಾ ಈ ಸಂದರ್ಭದಲ್ಲಿದ್ದರು.