ಬೆಂಗಳೂರು, ಸೆ.27- ಭಾರತಕ್ಕೆ ಬಾಹ್ಯಾಕಾಶವನ್ನು ಜಯಿಸಲು ವಿಪುಲ ಅವಕಾಶಗಳಿವೆ. ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸಲು ಅನುವಾಗುವಂತೆ ಸಂಶೋಧನೆಗಳಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಚ್‍ಎಎಲ್‍ನ ಏರೋಸ್ಪೇಸ್ ವಿಭಾಗದಲ್ಲಿ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ಐಎಮ್‍ಎಫ್) ಹಾಗೂ ಏರೋಸ್ಪೇಸ್ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಏರೋಸ್ಪೇಸ್ , ಆರ್.ಅಂಡ್ ಡಿ, ರಕ್ಷಣಾ ನೀತಿಗಳು ಜಾರಿಯಲ್ಲಿದ್ದು, ಸರ್ಕಾರದ ವತಿಯಿಂದ ಈ ಎಲ್ಲಾ ಸಂಶೋಧನೆ ಗಳಿಗೆ ಅಗತ್ಯ ಸಹಕಾರವನ್ನು ನೀಡಲಿದೆ.ಕರ್ನಾಟಕ ಹೊಸ ವಿಜ್ಞಾನ, ಆವಿಷ್ಕಾರ ಹಾಗೂ ಹೊಸ ಪಥದತ್ತ ನಡೆಯುತ್ತಿದೆ. ನಮ್ಮ ಸರ್ಕಾರದ ಘೋಷವಾಕ್ಯವೂ ನವ ಭಾರತಕ್ಕಾಗಿ ನವ ಕರ್ನಾಟಕ ಎಂದಿದೆ ಎಂದರು.
ಒಂದು ಆವಿಷ್ಕಾರ ಹಲವಾರು ಸಂಶೋಧನೆಗಳಿಗೆ ಎಡೆ ಮಾಡಿಕೊಡುತ್ತದೆ. ಮನುಕುಲದ ಒಳಿತಿಗಾಗಿ ಸಂಶೋಧನೆ ಗಳಾಗಬೇಕು. ಬಾಹ್ಯಾಕಾಶ ನಮ್ಮ ಕಲ್ಪನೆಗಳಿಗೆ ಸೂರ್ತಿ. ಹಾಗಾಗಿ ಮನುಷ್ಯನಿಗೆ ಅಂತರಿಕ್ಷದ ಬಗ್ಗೆ ಮೊದಲಿನಿಂದಲೂ ಆಕರ್ಷಣೆ ಇದೆ ಎಂದರು.
ಭಾರತ ಅನಾದಿ ಕಾಲದಿಂದಲೂ ಬಾಹ್ಯಾಕಾಶದ ಅನ್ವೇಷಣೆಯಲ್ಲಿ ತೊಡಗಿದೆ. ಆರ್ಯಭಟ ಈ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದರು. ಇಂದಿನ ಅನ್ವೇಷಣೆಗಳಿಗೆ ಅವರ ಸಂಶೋಧನೆಗಳು ಸೂರ್ತಿಯಾಗಿದೆ. ಇಂದು ವಿಜ್ಞಾನ ಕ್ಷೇತ್ರದಲ್ಲಿ ಭಾರತ ಬೇರೆ ಯಾವ ದೇಶಕ್ಕೂ ಕಡಿಮೆ ಇಲ್ಲ. ಅಂತರಿಕ್ಷ ಸಂಶೋಧನೆಗಳಲ್ಲಿ ತೊಡಗಿರುವ ಎಲ್ಲಾ ವಿಜ್ಞಾನಿಗಳು ಹಾಗೂ ಇಂಜಿನಿಯರ್‍ಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ನಾವು ಇಂದು ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ. ಕಳೆದ 4-5 ದಶಕಗಳಿಂದ ಕ್ರಯೋಜೆನಿಕ್ ಇಂಜಿನ್ ಪ್ರಪಂಚದಲ್ಲಿ ಚರ್ಚೆಯಾಗುತ್ತಿರುವ ವಿಷಯ.ಆದರೆ ಕೆಲವೇ ದೇಶಗಳಲ್ಲಿ ಇದರ ಅಭಿವೃದ್ದಿ ಸಾಧ್ಯವಾಗಿದೆ.
ಬಾಹ್ಯಾಕಾಶ ತಂತ್ರಜ್ಞಾನ ಕೆಲವೇ ದೇಶಗಳಲ್ಲಿದ್ದುದರಿಂದ ಅದರ ಅಭಿವೃದ್ಧಿಯೂ 4-5 ದೇಶಗಳಿಗೆ ಸೀಮಿತವಾಗಿಯೇ ಇತ್ತು. ಕ್ರಯೋಜೆನಿಮ್ ಇಂಜಿನ್ ಗೆ ಬಳಸುವ ಸಾಮಾಗ್ರಿಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗುತ್ತಿತ್ತು. ಅದರ ಸಂಶೋಧನೆಯೇ ಒಂದು ಸಾಧನೆ. ನಂತರದಲ್ಲಿ ಇಂಧನವನ್ನು ಹಾಕುವ ಸಾಧನವನ್ನು ಕಂಡುಹಿಡಿಯಲಾಗಿದೆ. ಇಂಧನದ ಸ್ಥಿರತೆಯನ್ನು ನಿರ್ವಹಿಸಬೇಕು ಎಂದರು.
ನಮ್ಮ ಪ್ರಧಾನ ಮಂತ್ರಿಗಳ ಆತ್ಮನಿರ್ಭರ್ ಭಾರತ್ ಘೋಷಣೆಯಂತೆ ನಾವು ಈಗ ದೊಡ್ಡ ಮಟ್ಟದಲ್ಲಿ ನಿಂತಿದ್ದೇವೆ ಕ್ರಯೋಜೆನಿಕ್ ಇಂಜಿನ್ ತಯಾರು ಮಾಡುವ ದೇಶಗಳಲ್ಲಿ ಭಾರತವೂ ಸೇರಿದೆ ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರ. ಇಸ್ರೋ ಮತ್ತು ಹೆಚ್.ಎ.ಎಲ್ ಎರಡರ ಸಂಯೋಜನೆಯಿಂದಾಗಿ ದೇಶದ ಬಾಹ್ಯಾಕಾಶದ ನಗರವೆಂದು ಬೆಂಗಳೂರನ್ನು ಪರಿಗಣಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶೇ.65 ರಷ್ಟು ಏರೋಸ್ಪೇಸ್ ಭಾಗಳನ್ನು ಬೆಂಗಳೂರಿನಿಂದ ರಪ್ತು ಮಾಡಲಾಗುತ್ತಿದೆ. ಶೇ.60ರಷ್ಟು ರಕ್ಷಣಾ ಸಾಮಾಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ.25ರಷ್ಟು ಏರೋಸ್ಪೇಸ್ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ತಾಯಿ ಹಾಗೂ ಹಬ್ ಎಂದು ಖ್ಯಾತಿ ಪಡೆದಿದೆ. ಇಸ್ರೋ ಹಾಗೂ ಹೆಚ್.ಎ. ಎಲ್ ಎರಡೂ ಒಟ್ಟಾಗಿ ಕೆಲಸ ಮಾಡುವುದು ಲಾಭದಾಯಕವಾಗಿದೆ. ಹೈಬ್ರಿಡ್ ಕ್ರಯೋಜೆನಿಕ್ ಇಂಜಿನ್ ನ್ನು ಇಸ್ರೋ ಅಭಿವೃದ್ಧಿ ಪಡಿಸುತ್ತಿದ್ದು ಹೆಚ್.ಎ. ಎಲ್ ಶೀಘ್ರದಲ್ಲಿಯೇ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದರು.
ಆರೋಗ್ಯ ವಿಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಸಂಶೋಧನಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆಗಳು, ನಿಮ್ಹಾನ್ಸ್, ಕಿದ್ವಾಯಿ, ರಾಷ್ಟ್ರಮಟ್ಟದ ಮಕ್ಕಳ ಆಸ್ಪತ್ರೆಗಳು, ಆರ್ ಅಂಡ್ ಡಿ ಕೇಂದ್ರಗಳು, ಅಂಗಾಂಗ ಕಸಿ ಕೇಂದ್ರಗಳು ಇಲ್ಲಿವೆ. ಒಂದು ವರ್ಷ ದೊಳಗೆ 200 ಪ್ರಯೋಗಾಲಯಗಳನ್ನು ಆರ್.ಟಿ. ಪಿ.ಸಿ ಆರ್.ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎನ್.ಐ.ವಿ, ದಕ್ಷಿಣ ವಲಯವು ತನ್ನ ಹೊಸ ಆವಿಷ್ಕಾರಗಳಿಂದ ದೇಶಕ್ಕೇ ಸಹಾಯ ಮಾಡಲಿದ್ದಾರೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್, ಹೆಚ್.ಎ. ಎಲ್ ಅಧ್ಯಕ್ಷ ಅನಂತಕೃಷ್ಣ, ಇಸ್ರೋ ಅಧ್ಯಕ್ಷ ಸೋಮನಾಥ್, ಆರೋಗ್ಯ ಸಚಿವ ಡಾ:ಕೆ.ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.