ಮೈಸೂರು,ಆ.11- ಎಪ್ಪತ್ತೈದನೆ ಸ್ವಾತಂತ್ರ್ಯೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಸೂರಿನಲ್ಲಿಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
75ನೇ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಳವಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಾದ್ಯಂತ ಸರ್ಕಾರ ಅದ್ಧೂರಿಯಾಗಿ ಆಚರಿಸಲಿದೆ. ಮುಂದಿನ ನಮ್ಮ ದೇಶದ ಭವಿಷ್ಯ ನಮ್ಮ ಜನತೆಯ ಕೈಯಲ್ಲಿದೆ. ಹರ್ ಘರ್ ತಿರಂಗಕ್ಕೆ ಕಾಂಗ್ರೆಸ್ ಟೀಕೆ ಮಾಡುತ್ತಿರುವ ವಿಚಾರಕ್ಕೆ ಕಿಡಿಕಾರಿದರು.
ತ್ರಿವರ್ಣ ಧ್ವಜ ತ್ಯಾಗ, ಬಲಿದಾನ, ಹೋರಾಟದಿಂದ ಸಿಕ್ಕಿರುವುದು. ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಹೋರಾಟ ಮಾಡಿರುವ ಫಲ. ಸ್ವಾತಂತ್ರ್ಯ ಹೋರಾಟವನ್ನು ತಿರುಚದೆ ಸತ್ಯಾಸತ್ಯತೆ ತಿಳಿಸಬೇಕಿದೆ. ತ್ರಿವರ್ಣ ಧ್ವಜದಲ್ಲಿ ಭಾರತದ ಏಕತೆ, ಶಕ್ತಿ, ಸ್ವಾತಂತ್ರ್ಯ, ಭವಿಷ್ಯ ಎಲ್ಲವೂ ಅಡಗಿದೆ. ಅದರ ಬಗ್ಗೆ ವಿರೋಧ ಮಾಡುವುದು, ಟೀಕೆ ಮಾಡುವುದು ದೇಶ ವಿರೋಧಿ ಕೃತ್ಯದಂತೆ. ಅಂತಹ ಕೀಳುಮಟ್ಟದ ಮಾತಿಗೆ ಜನತೆ ಬೆಲೆ ಕೊಡುವುದಿಲ್ಲ.
ಜನ ಮತ್ತಷ್ಟು ಸ್ಪೂರ್ತಿ, ಪ್ರೇರಣೆಯಿಂದ ಆಚರಣೆ ಮಾಡುತ್ತಾರೆ. ಸ್ವಾತಂತ್ರ್ಯದ ಬಗ್ಗೆ ಕೆಲವರಿಗೆ ಇತಿಹಾಸ ಗೊತ್ತಿಲ್ಲ. ಕೆಲವರು ಅದನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ತಿರಂಗ ಯಾತ್ರೆ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಹರ್ ಘರ್ ತಿರಂಗವನ್ನು ಅದ್ಧೂರಿ, ವಿಜೃಂಭಣೆಯಿಂದ ಆಚರಿಸುತ್ತೇವೆ. ಬಾವುಟದ ಬಗ್ಗೆ ಕೀಳರಿಮೆಯಿಂದ ಮಾತನಾಡಬಾರದು. ಬಾವುಟ ದೇಶವನ್ನು ಒಗ್ಗೂಡಿಸುವ ಸಂಕೇತ. ಬಾವುಟ ಹಿಡಿದ ದೇಶಪ್ರೇಮಿಗಳನ್ನು ಯಾರೂ ಟೀಕೆ ಮಾಡಬಾರದು. ಕಾಂಗ್ರೆಸ್ ಟೀಕೆಗಳಿಗೆ ಜನರು ಕಿವಿಕೊಡುವುದಿಲ್ಲ ಎಂದು ತಿಳಿಸಿದರು.
ಮಳೆ ಹಾನಿ ಪರಿಹಾರಕ್ಕೆ ಪ್ರತಿಕ್ರಿಯಿಸಿ ಮಳೆಹಾನಿ ಸಂಬಂಧ ಸೂಕ್ತ ಪರಿಹಾರ ನೀಡಲಾಗುವುದು. ನೀರು ನುಗ್ಗಿದ್ದಕ್ಕೆ ಹತ್ತು ಸಾವಿರ, ಪೂರ್ಣ ಬಿದ್ದಿದ್ದಕ್ಕೆ ಮೊದಲ ಹಂತದಲ್ಲಿ ಪರಿಹಾರ ನೀಡುತ್ತಿದ್ದೇವೆ. ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ಅದರ ರಿಪೇರಿಗೆ ಹಣ ಬಿಡುಗಡೆಯಾಗಿದೆ. ಬೆಳೆ ಹಾನಿ ಸಂಬಂಧ ಸಮೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ತಕ್ಷಣ ಎಲ್ಲ ಪರಿಹಾರಗಳನ್ನು ನೀಡಲಾಗುವುದು. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಯಾಗಿದೆ ಎಂದು ತಿಳಿಸಿದರು.
ಒಮಿಕ್ರಾನ್ ರೂಪಾಂತರ ತಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರದಿಂದ ಸೂಚನೆ ಬರುವ ಮುನ್ನವೇ ನಾವು ಎಚ್ಚೆತ್ತುಕೊಂಡಿದ್ದೇವೆ. ನಿರಂತರವಾಗಿ ಅದರ ಕುರಿತು ಸಂಶೋಧನೆ ನಡೆಯುತ್ತಿದೆ. ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು.