ಆ.11ರಿಂದ ‘ಹರ್ ಘರ್ ತಿರಂಗ’ ಅಭಿಯಾನ

Social Share

ಬೆಂಗಳೂರು,ಜು.13- ದೇಶವು 75ನೇ ಅಜಾದಿ ಕಾ ಅಮೃತ್ ಮಹೋತ್ಸವ ಅಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ದೇಶ ಭಕ್ತಿ ಬಿಂಬಿಸುವ ಹರ್ ಘರ್ ತಿರಂಗ ಅಭಿಯಾನವನ್ನು ಆ.11ರಿಂದ 17ರವರೆಗೆ ರಾಜ್ಯಾದ್ಯಂತ ನಡೆಸಬೇಕೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದ್ದು, ಅನೇಕರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಇದರ ಸ್ಮರಣಾರ್ಥವಾಗಿ ಆ.11ರಿಂದ 17ರವರೆಗೆ ಪ್ರತಿ ಮನೆ ಮನೆಯಲ್ಲೂ ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಈ ಅಭಿಯಾನವನ್ನು ಸರ್ಕಾರಿ, ಅರೆ ಸರ್ಕಾರಿ, ನಾಗರಿಕ ಸಂಸ್ಥೆಗಳು, ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು ಸೇರಿದಂತೆ ಇತರೆ ಎಲ್ಲ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಲು ಅವರಿಗೆ ಅಗತ್ಯ ಪ್ರೇರೇಪಣೆ ನೀಡಬೇಕೆಂದು ಸೂಚಿಸಲಾಗಿದೆ.
ಜಿಪಂ, ತಾಪಂ ಪಂಚಾಯ್ತಿಗಳಿಂದ ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ಅರೆ ಸರ್ಕಾರಿ, ನಿಗಮ ಮಂಡಳಿಗಳು, ಸಾರ್ವ ಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು ಸೇರಿದಂತೆ ಅವರ ಕುಟುಂಬ ವರ್ಗದವರು ಸ್ವಯಂಪ್ರೇರಿತವಾಗಿ ಭಾಗವಹಿಸಲು ಅಭಿಯಾನವನ್ನು ಕೈಗೊಳ್ಳಬೇಕೆಂದು ನಿರ್ದೇಶನ ಮಾಡಲಾಗಿದೆ.

ಕೈಯಲ್ಲಿ ತಯಾರಿಸಿದ ಅಥವಾ ಯಂತ್ರದಿಂದ ತಯಾರಿಸಿದ ಪಾಲಿಸ್ಟರ್, ಹತ್ತಿ, ಉಣ್ಣೆ, ರೇಷ್ಮೆ, ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ಮನೆಗಳ ಮೇಲೆ ಹಾರಿಸಬೇಕು. ಆ.11ರಂದು ಗ್ರಾಮೀಣ ಭಾಗದ ಎಲ್ಲ ಸಮುದಾಯಗಳು, ಸರ್ಕಾರ, ಸರ್ಕಾರೇತರ ಸಂಸ್ಥೆ, ಸಾರ್ವಜನಿಕ ಉದ್ದಿಮೆಗಳು, ಶಾಲಾಕಾಲೇಜು ಮಕ್ಕಳಿಗೆ ತಿಳಿಸುವ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕೆಂದು ಸೂಚಿಸಲಾಗಿದೆ.

ಸ್ಥಳೀಯ ಭಾಷೆಯಲ್ಲಿ ಕರಪತ್ರ, ಸ್ಟ್ಯಾಂಡೀಸ್, ಬ್ಯಾನರ್ ಇತ್ಯಾದಿಗಳ ಮುಖಾಂತರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಲ್‍ಗಳು, ಉದ್ಯಾನ ವನಗಳು, ಹೋಟೆಲ್‍ಗಳು, ಕಚೇರಿಗಳ ಮುಂದೆ ಪ್ರಚಾರ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವಂತೆ ಪೋಷಕರಿಗೆ ತಿಳಿಸಲು ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಡಶಾಲೆ ಮಕ್ಕಳಿಗೆ ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸ್ವಹಾಯ ಸಂಘಗಳು, ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಸಹಕಾರ ಸಂಘಗಳು, ಉಪ ಅಂಚೇ ಕಚೇರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ರೋಜ್‍ಗಾರ್ ಸೇವಕರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

ಈ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಪಾತ್ರ ವಹಿಸಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Articles You Might Like

Share This Article