ಬೆಂಗಳೂರು, ಆ.4- ರಾಜ್ಯ ವಿಪತ್ತು ಸ್ಪಂದನಾ ಪಡೆ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಗೃಹ ಸಚಿವ ಆರಗಜ್ಞಾನೇಂದ್ರ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿ ರಾಷ್ಟ್ರ ಧ್ವಜವಿಡಿದು ಹೆಜ್ಜೆ ಹಾಕಿದರು.
ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಗೃಹ ಸಚಿವರು, ಸಾವಿರಾರು ಜನರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿ ಪ್ರಜೆ ದೇಶಕ್ಕೆ ನಿಷ್ಠನಾಗಿ ಇರಬೇಕು. ಕನಸಿನ ಭಾರತದ ಸಂಕಲ್ಪವನ್ನು ನಾವೆಲ್ಲ ಮಾಡಬೇಕು ಎಂದು ಹೇಳಿದರು.
ನಮ್ಮ ಇಲಾಖೆ, ಅಗ್ನಿಶಾಮಕ ಇಲಾಖೆ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದೆ. ಹರ್ ಘರ್ ತಿರಂಗಾ ಅಭಿಯಾನ ಮಾಡಿದ್ದೇವೆ. ಪ್ರತಿಯೊಬ್ಬರ ಮನೆ ಮೇಲೂ ತಿರಂಗ ಹಾರಬೇಕು ಎಂದರು.