ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

Social Share

ಬೆಂಗಳೂರು, ಆ.12- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ (ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ) ಅಭಿಯಾನದ ಪ್ರಯುಕ್ತ ಇಂದು ಯಲಹಂಕ ವಲಯ ಆರ್‍ಎಂಝಡ್ ಗ್ಯಾಲೇರಿಯಾ ಮಾಲ್‍ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನದಡಿ ನಗರದ ವಿಧಾನಸೌಧ, ಎಂ.ಎಸ್ ಬಿಲ್ಡಿಂಗ್, ವಿ.ವಿ.ಟವರ್ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಿರುವ ಪಾಲಿಕೆಯ ಧ್ವಜ ಮಾರಾಟ ಮೊಬೈಲ್ ಕೇಂದ್ರಕ್ಕೆ ಇದೇ ವೇಳೆ ಅವರು ಚಾಲನೆ ನೀಡಿದರು.

ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಚಾರ ಸಾಮಗ್ರಿಗಳಾದ ಕರಪತ್ರ, ಸ್ಟಿಕ್ಕರ್ ಹಾಗೂ ಬ್ಯಾಡ್ಜ್ ಅನ್ನು ಅನಾವರಣಗೊಳಿಸಿದರು.

ಪೌರಕಾರ್ಮಿಕರಿಗೆ ಸಿಎಂ ಅಭಿನಂದನಾ ಪತ್ರ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂದೇಶದ ಮೂಲಕ ಅಭಿನಂದನಾ ಪತ್ರವನ್ನು ಕಳುಹಿಸಿದ್ದು, ಅಭಿನಂದನಾ ಪತ್ರವನ್ನು ಮುಖ್ಯ ಆಯುಕ್ತರು ಪೌರಕಾರ್ಮಿಕರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯಶ್ರೀ ನಟರಾಜ್ ಅವರು ದೇಶಭಕ್ತಿ ಗೀತೆಗಳಿಗೆ ಅನುಗುಣವಾಗಿ ಭಾರತಾಂಬೆ, ತ್ರಿವರ್ಣ ಧ್ವಜ, ಯೋಧರ ಭಾವಚಿತ್ರಗಳನ್ನು ಬಿಡಿಸಿದರು. ಅಲ್ಲದೇ ಹರ್ ಘರ್ ತಿರಂಗಾ ನೃತ್ಯ ಪ್ರದರ್ಶನಗಳು, ಡೊಳ್ಳು ಕುಣಿತ ಸೇರಿದಂತೆ
ಇನ್ನಿತರೆ ಕಾರ್ಯಕ್ರಮಗಳು ನಡೆಯಿತು.

ಈ ವೇಳೆ ವಲಯ ವಿಶೇಷ ಆಯುಕ್ತರಾದ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ಗಾಯಕರಾದ ಜಯಶ್ರೀ, ಮುಖ್ಯ ಅಭಿಯಂತರರಾದ ರಂಗನಾಥ್, ಪಾಲಿಕೆಯ ಅಕಾರಿಗಳು, ಸ್ಥಳೀಯ ನಾಗರಿಕರು, ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ವಿಕಲ ಚೇತನರು, ಪೌರಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Articles You Might Like

Share This Article