ಹರ್ ಘರ್ ತಿರಂಗ : ಇಂದಿನಿಂದ ಆ.15ರವರೆಗಿನ ತಿರಂಗೋತ್ಸವ

Social Share

ನವದೆಹಲಿ,ಆ.2- ರಾಷ್ಟ್ರದ ತ್ರಿವರ್ಣ ಧ್ವಜ ವಿನ್ಯಾಸಗೊಳಿಸಿದ ಪಿಂಗಾಳಿ ವೆಂಕಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಇಂದಿನಿಂದ ಆ.15ರವರೆಗೆ ತಿರಂಗೋತ್ಸವ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ರಾಷ್ಟ್ರ ಧ್ವಜ ವಿನ್ಯಾಸಗೊಲಿಸಿದ ಪಿಂಗಾಳಿ ವೆಂಕಯ್ಯ ಅವರ ಶ್ರಮ ಮತ್ತು ಬದ್ದತೆಗೆ ದೇಶ ಸದಾಕಾಲ ಋಣಿಯಾಗಿರುತ್ತದೆ. ಇದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡೆಯುವ ವಿಷಯ.

ದೇಶದ ಪ್ರಗತಿಗೆ ನಿರಂತರವಾಗಿ ಕೆಲಸ ಮಾಡಲು ಇದು ಸ್ಪೂರ್ತಿ ಮತ್ತು ಶಕ್ತಿದಾಯಕ ಎಂದು ಹೇಳಿದ್ದಾರೆ. ವೆಂಕಯ್ಯ ಅವರ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಪ್ರಥಮ ಧ್ವಜವನ್ನು ಪ್ರದರ್ಶನಕ್ಕಿಡಲಾಯಿತು. ಇಂದು ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ಗೌರವಿಸಲಾಯಿತು.

2009ರಲ್ಲೂ ಪಿಂಗಾಳಿ ಅವರ ಸ್ಮರನಾರ್ಥ ಅಂಚೆಚೀಟಿ ಬಿಡುಗಡೆ ಮಾಡಲಾಗಿತ್ತು. 2014ರಲ್ಲಿ ವಿಜಯವಾಡದ ಆಲ್ ಇಂಡಿಯಾ ರೇಡಿಯೋ ಕೇಂದ್ರಕ್ಕೆ ಪಿಂಗಾಳಿ ವೆಂಕಯ್ಯ ಅವರ ಹೆಸರನ್ನು ನಾಮಪಕರಣ ಮಾಡಲಾಗಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಕಳೆದ ವರ್ಷ ಪಿಂಗಾಳಿ ಅವರಿಗೆ ಭಾರತರತ್ನ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.

ಆಂಧ್ರಪ್ರದೇಶದ ಮಚಲಿಪಟ್ಟಣಂನಲ್ಲಿ 1876ರ ಆಗಸ್ಟ್ 2ರಂದು ಪಿಂಗಾಳಿಯವರು ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು 1921ರಲ್ಲಿ ರಾಷ್ಟ್ರಕ್ಕಾಗಿ ಹಲವು ಮಾದರಿಗಳ ಧ್ವಜಗಳನ್ನು ವಿನ್ಯಾಸಗೊಳಿಸಿದ್ದರು.
ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಗಾಂೀಧಿಜಿ ಈಗ ಬಳಕೆಯಲ್ಲಿರುವ ಧ್ವಜವನ್ನು ಅಂಗೀಕರಿಸಿದ್ದರು. 1963ರ ಜುಲೈ 4ರಂದು ಸ್ವಾತಂತ್ರ್ಯ ಭಾರತದಲ್ಲಿ ಪಿಂಗಾಳಿ ಇಹಲೋಕ ತ್ಯಜಿಸಿದರು.

ತಿರಂಗೋತ್ಸವದ ಅಂಗವಾಗಿ ಇಂದಿನಿಂದ ಆ.15ರವರೆಗೆ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್‍ಗಳಲ್ಲಿ ರಾಷ್ಟ್ರಧ್ವಜವನ್ನೇ ಬಳಕೆ ಮಾಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಆ.13ರಿಂದ 15ರವರೆಗೂ ಹರ್ ಘರ್ ತಿರಂಗ ಅಭಿಯಾನದ ಪ್ರಯುಕ್ತ ಪ್ರತಿಯೊಬ್ಬರ ಮನೆ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವಂತೆಯೂ ಕರೆ ನೀಡಿದ್ದಾರೆ. ಇಂದು ಪ್ರಧಾನಿಯವರು ತಮ್ಮ ಸಾಮಾಜಿಕ ಜಾಲತಾಣದಲ್ಲಿನ ಪ್ರೊಫೈಲ್ ಪಿಕ್ಚರ್‍ನಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿದ್ದಾರೆ.

Articles You Might Like

Share This Article