ಹರ್-ಘರ್ ತಿರಂಗ ಅಭಿಯಾನಕ್ಕೆ ರಾಷ್ಟ್ರಧ್ವಜಗಳ ಕೊರತೆ

Social Share

ಬೆಂಗಳೂರು,ಆ.12- ಮನೆ-ಮನೆ ತಿರಂಗಾ ಅಭಿಯಾನಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ಸಕಲ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಒಂದು ಕೋಟಿ ರಾಷ್ಟ್ರಧ್ವಜ ಹಾರಿಸುವ ಗುರಿ ರಾಜ್ಯ ಸರ್ಕಾರದ್ದಾಗಿದೆ. ಆದರೆ, ರಾಷ್ಟ್ರಧ್ವಜಗಳ ಕೊರತೆ ಎದುರಾಗಿರುವುದರಿಂದ ಒಂದು ಕೋಟಿಯ ಗುರಿ ಮುಟ್ಟುವುದು ಅನುಮಾನವಾಗಿದೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ನಾಳೆಯಿಂದ ಆ.15 ರವರೆಗೆ ಹಮ್ಮಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದರು. ಅದರಂತೆ ರಾಜ್ಯ ಸರ್ಕಾರ ಈ ಅಭಿಯಾನದ ಯಶಸ್ಸಿಗಾಗಿ ಸಕಲ ತಯಾರಿ ನಡೆಸಿದೆ. ಈ ದಿನಗಳಂದು ರಾಜ್ಯದಲ್ಲಿರುವ ಎಲ್ಲಾ ಮನೆಗಳು, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳು ಹಾಗೂ ಇತರೆ ಎಲ್ಲಾ ಕಟ್ಟಡಗಳ ಮೇಲೆ ಧ್ವಜವನ್ನು ಹಾರಿಸಲು ಸರ್ಕಾರ ಮುಂದಾಗಿದೆ.

ಆದರೆ, ರಾಜ್ಯ ಸರ್ಕಾರಕ್ಕೆ ರಾಷ್ಟ್ರಧ್ವಜ ಸಂಗ್ರಹಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜಿಲ್ಲಾಡಳಿತ ತಿರಂಗಾ ಪೂರೈಸುವಂತೆ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸುತ್ತಿದೆ. ಹಾಗಾಗಿ ಒಂದು ಕೋಟಿ ತಿರಂಗಾ ಹಾರಿಸುವ ಗುರಿ ಮುಟ್ಟುವುದು ಅನುಮಾನವಾಗಿದೆ. ರಾಜ್ಯ ಸರ್ಕಾರಕ್ಕೆ ತಿರಂಗಾದ ಕೊರತೆ ಎದುರಾಗಿದ್ದು, ಬೇಡಿಕೆ ಪೂರೈಸಲು ಕಸರತ್ತು ನಡೆಸುವಂತಾಗಿದೆ.

ಜಿಲ್ಲಾಡಳಿತಗಳಿಂದ ಬಂದಿರುವ ಬೇಡಿಕೆ ಎಷ್ಟು?: ತಿರಂಗಾ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಮನೆಗಳ ಮೇಲೆ ಧ್ವಜಗಳನ್ನು ಹಾರಿಸುವ ಬಗ್ಗೆ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲಾ ವ್ಯಾಪ್ತಿಗೆ ಸರಾಸರಿ 1.5 ಲಕ್ಷ ದಿಂದ 2.50 ಲಕ್ಷದವರೆಗೆ ಬೇಡಿಕೆ ಸಲ್ಲಿಸಿದ್ದಾರೆ.

ಅದರಂತೆ ರಾಜ್ಯದಲ್ಲಿನ 31 ಜಿಲ್ಲೆಗಳಿಗೆ ಸುಮಾರು 60 ಲಕ್ಷ ರಾಷ್ಟ್ರಧ್ವಜ ಪೂರೈಕೆ ಮಾಡಬೇಕಾಗಿದೆ. ಜಿಲ್ಲಾಡಳಿತಗಳಿಗೆ ಸುಮಾರು 12-15 ಲಕ್ಷ ತಿರಂಗಾ ಸಂಗ್ರಹಿಸಲು ಸೂಚಿಸಲಾಗಿದೆ. ಆದರೆ, ಸ್ಥಳೀಯವಾಗಿ ತಿರಂಗಾ ಲಭ್ಯತೆಯ ಕೊರತೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಸ್ಥಳೀಯವಾಗಿ ಲಭ್ಯತೆಯ ಕೊರತೆಬಿದ್ದಲ್ಲಿ ಧ್ವಜಗಳನ್ನು ಪೂರೈಸುವ ಅವಕಾಶ ಕಲ್ಪಿಸಿದೆ. ಅದರಂತೆ, ಕೇಂದ್ರ ಸರ್ಕಾರದಿಂದ ಧ್ವಜಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ತಿರಂಗಾ ಕೊರತೆ ಹಿನ್ನೆಲೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ 50 ಲಕ್ಷ ತಿರಂಗಾ ಸರಬರಾಜು ಮಾಡುವಂತೆ ಬೇಡಿಕೆ ಇಟ್ಟಿದೆ. ಈ ಪೈಕಿ ಈಗಾಗಲೇ ಕೇಂದ್ರ ಸರ್ಕಾರ 40 ಲಕ್ಷ ಧ್ವಜಗಳನ್ನು ಪೂರೈಸಿದೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ 10 ಲಕ್ಷ ತಿರಂಗಾ ಕೇಂದ್ರದಿಂದ ಪೂರೈಕೆ ಮಾಡಬೇಕಾಗಿದೆ. ಈ ತಿರಂಗಾಗಳನ್ನು ಎಲ್ಲಾ ಜಿಲ್ಲಾಡಳಿತ ಹಾಗೂ ಬಿಬಿಎಂಪಿಗೆ ಹಂಚಿಕೆ ಮಾಡಲಾಗುತ್ತಿದೆ. ಧ್ವಜಗಳನ್ನು ಸಾರ್ವಜನಿಕರಿಗೆ 22 ರೂ. ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.
ಇದರ ಜೊತೆಗೆ ಸುಮಾರು 18 ಲಕ್ಷ ಧ್ವಜಗಳನ್ನು ಸ್ವಸಹಾಯ ಗುಂಪುಗಳಿಂದ ಖರೀದಿಸಲಾಗಿದೆ.

ಸುಮಾರು 10 ಲಕ್ಷ ಧ್ವಜಗಳನ್ನು ಸ್ಥಳೀಯವಾಗಿ ಸಂಗ್ರಹಿಸಲಾಗುತ್ತಿದೆ. ಬಿಬಿಎಂಪಿ ಸುಮಾರು 10-15 ಲಕ್ಷ ತಿರಂಗಾವನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಕರ್ನಾಟಕ ಅಂಚೆ ಇಲಾಖೆ 12 ಲಕ್ಷ ಮಾರಾಟ ಮಾಡುವ ಗುರಿ ಹೊಂದಿದೆ. ಆದರೆ, ಅಧಿಕಾರಿಗಳು ಹೇಳುವ ಪ್ರಕಾರ ರಾಷ್ಟ್ರಧ್ವಜದ ಲಭ್ಯತೆಯನ್ನು ನೋಡಿದರೆ ಒಂದು ಕೋಟಿ ಗುರಿ ಮುಟ್ಟುವುದು ಅನುಮಾನವಾಗಿದೆ.

Articles You Might Like

Share This Article