ಟಸ್‍ಕೆಂಟ್, ಜು. 19- ಭಾರತದ ಉದಯೋನ್ಮುಖ ವೇಟ್ ಲಿಫ್ಟರ್ ಹರ್ಷದಾ ಗುರದ್ ಅವರು ಏಷ್ಯಾನ್ ಯೂತ್ ಮತ್ತು ಜೂನಿಯರ್ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ ಮೇ ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ 153 ಕೆಜಿ (70 ಕೆಜಿ+ 83 ಕೆಜಿ) ಭಾರತ ಎತ್ತಿ ಪದಕ ಗೆದ್ದಿದ್ದ ಹರ್ಷದಾ ಏಷ್ಯಾನ್ ಯೂತ್ ಮತ್ತು ಜೂನಿಯರ್ ವೇಟ್ ಲಿಫ್ಟಿಂಗ್‍ನಲ್ಲಿ 45 ಕೆಜಿ ವಿಭಾಗದಲ್ಲಿ 157 ಕೆಜಿ (69 ಕೆಜಿ+ 88 ಕೆಜಿ) ಭಾರ ಎತ್ತುವ ಮೂಲಕ ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಭಾರತದವರೇ ಆದ ಸೌಮ್ಯ ದೇವಿ 145 ಕೆಜಿ ( 63 ಕೆಜಿ+ 82 ಕೆಜಿ) ಭಾರ ಎತ್ತಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ 49 ಕೆಜಿ ವಿಭಾಗದಲ್ಲಿ ಭಾರತದ ಎಲ್.ಧನುಷ್ ಅವರು 185 ಕೆಜಿ (85 ಕೆಜಿ+100 ಕೆಜಿ) ಭಾರ ಮೇಲಕ್ಕೆತ್ತುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಏಷ್ಯಾನ್ ಯೂತ್ ಮತ್ತು ಜೂನಿಯರ್ ವೇಟ್ ಲಿಫ್ಟಿಂಗ್‍ನಲ್ಲಿ ಸ್ನ್ಯಾಚ್, ಕ್ಲೀನ್ ಮತ್ತು ಜೆರ್ಕ್ ವಿಭಾಗಕ್ಕೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ ಆದರೆ ಒಲಿಂಪಿಕ್ಸ್‍ನಲ್ಲಿ ಒಟ್ಟಾರೆ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.