ಹಾಸನಾಂಬ ದರ್ಶನೋತ್ಸವ ದಿನಗಳ ಹೆಚ್ಚಳಕ್ಕೆ ಪ್ರಸ್ತಾವನೆ ಇಲ್ಲ : ಶಶಿಕಲಾ ಜೊಲ್ಲೇ

Social Share

ಹಾಸನ, ಅ.15- ಹಾಸನಾಂಬ ದರ್ಶನೋತ್ಸವ ದಿನಗಳ ಹೆಚ್ಚಳಕ್ಕೆ ಅವಕಾಶ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮುಜರಾಯಿ ಖಾತೆ ಸಚಿವರಾದ ಶಶಿಕಲಾ ಜೊಲ್ಲೇ ಸ್ಪಷ್ಟಪಡಿಸಿದರು.

ನಗರದ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಹಿಂದೆ ಸರ್ಕಾರಕ್ಕೆ ದರ್ಶನೋತ್ಸವ ದಿನ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಜನರ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಹಾಗೂ ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ನಡವಳಿಕೆಗೆ ಧಕ್ಕೆಯಾಗುವಂತಹ ನಿರ್ಧಾರ ಮಾಡುವುದು ಸರಿಯಲ್ಲ ಎಂದು ಸಚಿವರು ತಿಳಿಸಿದರು.

ಹಾಸನ ದೇವಾಲಯ ಅಭಿವೃದ್ಧಿ ವಿಚಾರವಾಗಿ ಶಾಸಕರೊಂದಿಗೆ ಮಾತನಾಡಿ ಅಗತ್ಯ ಮಾಹಿತಿಯನ್ನು ಪಡೆದಿದ್ದೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಎರಡು ಕೋಟಿ ಅನುದಾನ ನೀಡಿದ್ದರು. ಅದರಂತೆ ದೇವಾಲಯದ ಅಭಿವೃದ್ಧಿಗೆ ಇಲಾಖೆಯಿಂದ ಅಗತ್ಯ ಅನುದಾನ ಹಾಗೂ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮುಜರಾಯಿ ಇಲಾಖೆಯಿಂದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 120 ಕೋಟಿ ಬಿಡುಗಡೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಉಜ್ಜಯಿನಿ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಬೆಳವಣಿಗೆಗೆ ಪೂರಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ದೇಶದಲ್ಲಿ ಧಾರ್ಮಿಕ ಸ್ಥಳಗಳ ಪ್ರಚಾರಕ್ಕೆ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಕಾರಿಡಾರ್‍ಗಳನ್ನು ಗುರುತಿಸಲಾಗಿದ್ದು, ಅಂತಯೇ ರಾಜ್ಯದಲ್ಲಿಯೂ ಸಹ ಐತಿಹಾಸಿಕ ಸ್ಥಳಗಳ ಕಾರಿಡಾರ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

ಹಾಸನಾಂಬ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ದೇವಾಲಯ ಮೂರು ದೇವತೆಗಳ ಶಕ್ತಿಯನ್ನು ಹೊಂದಿರುವ ಪ್ರತೀತಿ ಹೊಂದಿದೆ. ಇದೇ ರೀತಿ ದೇಶದಲ್ಲಿ ಶಕ್ತಿ ದೇವತೆಗಳ ದೇವಾಲಯಗಳ ಅನೇಕ ಉದಾಹರಣೆಗಳಿದ್ದು, ಹಾಸನಂಬ ದೇವಾಲಯದಲ್ಲಿ ಹಚ್ಚಿದ ದೀಪ ಮುಂದಿನ ವರ್ಷ ಬಾಗಿಲು ತೆರೆದರೂ ನಂದಿರುವುದಿಲ್ಲ ಎಂಬ ಧಾರ್ಮಿಕ ನಂಬಿಕೆ ಮತ್ತಷ್ಟು ಪ್ರಸಿದ್ಧಿ ಹೊಂದಲು ಕಾರಣವಾಗಿದೆ ಎಂದು ಹೇಳಿದರು.

ಹಾಸನಾಂಬ ದೇವಿಗೆ ವಿಶೇಷ ಪೂಜೆ ನೆರವೇರಿಸಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ ಅಭಿವೃದ್ಧಿ ಹೊಂದಲಿ. ದೇಶವು ಬೆಳವಣಿಗೆ ಕಂಡು ವಿಶ್ವದಲ್ಲಿಯೇ ಗುರುತಿಸುವಂತಾಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರೀತಂ ಗೌಡ, ನಗರಸಭೆ ಅಧ್ಯಕ್ಷ ಮೋಹನ್, ಬಿಜೆಪಿ ಪದಾಕಾರಿಗಳಾದ ವೇಣುಗೋಪಾಲ, ಐನೆಟ್ ವಿಜಿ ಮತ್ತಿತರರಿದ್ದರು.

Articles You Might Like

Share This Article