ವಹಿಂದು ಹಸರಂಗ ನನ್ನ ಸೋದರ : ಚಹಾಲ್
ಮುಂಬೈ, ಮೇ 16- ಶ್ರೀಲಂಕಾದ ಬೌಲರ್ ವಹಿಂದು ಹಸರಂಗ ನನ್ನ ಸಹೋದರನಿದ್ದಂತೆ ಪರ್ಪಲ್ ಕ್ಯಾಪ್ಗಾಗಿ ಅವರೊಂದಿಗೆ ಪೈಪೋಟಿ ನಡೆಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಖ್ಯಾತ ಬೌಲರ್ ಯಜುವೇಂದ್ರ ಚಹಾಲ್ ಅವರು ಹೇಳಿದ್ದಾರೆ.
ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಲಕ್ನೋ ಸೂಪರ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಚಹಾಲ್ ಅವರು ಮತ್ತೆ ಪರ್ಪಲ್ ಕ್ಯಾಪ್ (24 ವಿಕೆಟ್) ಜಯಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಕಳೆದ ಕೆಲವು ಋತುಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಸ್ಪಿನ್ನರ್ ಆಗಿದ್ದ ಚಹಾಲ್ ಅವರು ನಿನ್ನೆಯ ಪಂದ್ಯದಲ್ಲಿ ಎಲ್ಎಸ್ಜಿಯ ದೀಪಕ್ ಹೂಡಾರ ವಿಕೆಟ್ ಕಬಳಿಸುವ ಮೂಲಕ 13 ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಕೆಡವುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್ಗೆ ನೀಡುವ ಪರ್ಪಲ್ ಕ್ಯಾಪ್ಗೆ ಭಾಜನರಾಗಿದ್ದಾರೆ.
ಕಳೆದ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಹಸರಂಗ 13 ಪಂದ್ಯಗಳಲ್ಲಿ 23 ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದರು.
ಪ್ರಸಕ್ತ ಐಪಿಎಲ್ನಲ್ಲಿ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ತೋರುತ್ತಿರುವುದು ನನಗೆ ಸಂತಸ ತಂದಿದೆ, ಆರ್ಸಿಬಿಯ ಹಸರಂಗರಂತೆ ಡೆಲ್ಲಿ ಕ್ಯಾಪಿಟಲ್ಸ್ನ ವಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಕೂಡ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಲಗಾಮು ಹಾಕಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಹಸರಂಗ ಆಗಲೀ ಕುಲ್ದೀಪ್ ಯಾದವ್ ಆಗಲಿ ವಿಕೆಟ್ ಪಡೆಯುತ್ತಿರುವುದು ನನಗೆ ಸಂತಸ ತಂದಿದೆ ಎಂದು ಚಹಾಲ್ ತಿಳಿಸಿದರು.