ಬೆಂಗಳೂರು,ಆ.3- ನಗರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಹಾಗೂ ಮಂಗಳೂರು ಮೂಲದ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ 1.60 ಕೋಟಿ ರೂ. ಮೌಲ್ಯದ 2 ಕೆಜಿ 60 ಗ್ರಾಂ ಹ್ಯಾಶಿಶ್ ಆಯಿಲ್ ವಶ ಪಡಿಸಿಕೊಂಡಿದ್ದಾರೆ.
ಕೇರಳದ ಸಿಫಾನ್ ಮತ್ತು ಮಂಗಳೂರಿನ ಮಹಮ್ಮದ್ ಅಸ್ವಕ್ ಬಂಧಿತರು. ಆರೋಪಿ ಸಿಫಾನ್ ನಗರದ ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನಡೆಸುವ ಸೋಗಿನಲ್ಲಿ ಹಾಗೂ ಮೊಹಮ್ಮದ್ ಅಸ್ವಕ್ ಆನ್‍ಲೈನ್ ಯೂಟ್ಯೂಬ್ ಚಾನೆಲ್ ಆರ್ಟಿಸ್ಟ್ ಮ್ಯಾನೇಜ್‍ಮೆಂಟ್ ಬಿಸಿನೆಸ್ ಮಾಡುವುದಾಗಿ ಮೇಲ್ನೋಟಕ್ಕೆ ಬಿಂಬಿಸಿಕೊಂಡು ಒಳಗೆ ಮಾದಕವಸ್ತು ಮತ್ತು ಹ್ಯಾಶಿಶ್ ಆಯಿಲ್ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ.
ಜುಲೈ 29ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ಬೇಗೂರು ಕೊಪ್ಪ ರಸ್ತೆಯಲ್ಲಿರುವ ರೋಳ ಹೈಪರ್ ಮಾರ್ಕೆಟ್ ಪಕ್ಕದ ಖಾಲಿ ಜಾಗದಲ್ಲಿ ಕೆಲವರು ನಿಷೇಧಿತ ಮಾದಕವಸ್ತು ಹ್ಯಾಶೀಶ್ ಆಯಿಲ್‍ನ್ನು ತಂದು ಜನರಿಗೆ ಮಾರಾಟ ಮಾಡಿಕೊಂಡು ಹೋದರು. ಮುಂದೆಯೂ ಸಹ ಮಾರಾಟ ಮಡಲು ಬರುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಎಎಸ್‍ಐ ಚಿದಾನಂದ್ ನೀಡಿದ ದೂರಿನನ್ವಯ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗಳ ಅನುಮತಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 1.60 ಕೋಟಿ ರೂ. ಮೌಲ್ಯದ ಹ್ಯಾಶಿಶ್ ಆಯಿಲ್ ಹಾಗು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧಾಕರ್ ನೇತೃತ್ವದಲ್ಲಿ ಬೇಗೂರು ಠಾಣೆ ಇನ್‍ಸ್ಪೆಕ್ಟರ್ ಅನಿಲ್‍ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.