ಹುಬ್ಬಳ್ಳಿ,ಮಾ.4- ಆಗಾಗ ಸಿಗುತ್ತಿದ್ದ ಬಿಸ್ಕತ್, ಬಾಳೆಹಣ್ಣು ಹಾಗೂ ಚಿಪ್ಸ್ ತಿಂದೇ ವಾರ ಜೀವನ ಕಳೆದಿದ್ದೇವೆ. ಪೋಲೆಂಡ್‍ಗೆ ಬಂದು ಭಾರತೀಯ ವಿಮಾನದಲ್ಲಿ ಕುಳಿತು ಅನ್ನ ತಿಂದಾಗಲೇ ಬದುಕಿದ್ದೇವೆ ಅನಿಸಿತು. ಉಕ್ರೇನ್‍ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತರೂರ ಗ್ರಾಮದ ರಂಜಿತಾ ಶಂಕ್ರಪ್ಪ ಕಲಕಟ್ಟಿ ಹಾಗೂ ಹಾನಗಲ್‍ನ ಶಿವಾನಿ ಮಡಿವಾಳರ ಅವರ ಮಾತುಗಳಿವು.
ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿನ್ನೆ ಬಂದ ಅವರು ಸಂತೋಷ ದಿಂದಲೇ ಮಾಧ್ಯಮದವರ ಜೊತೆ ಮಾತನಾಡಿದರು. ಉಕ್ರೇನ್‍ನಲ್ಲಿ ಎದುರಿಸಿದ ನೋವುಗಳನ್ನು ಹಂಚಿಕೊಂಡರು. ಈ ಇಬ್ಬರೂ ವಿದ್ಯಾರ್ಥಿನಿಯರು ಹಾರ್ಕಿವ್‍ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.
ಶಿವಾನಿ ಅವರ ಪೋಷಕರು ಹಾಗೂ ರಂಜಿತಾ ಅವರ ಸಂಬಂಕರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಶಿವಾನಿ ತಾಯಿ ಸುಮಿತ್ರಾ ಹಾಗೂ ತಂದೆ ಚಂದ್ರಪ್ಪ ಅವರು ಮಗಳನ್ನು ಬಿಗಿದಪ್ಪಿ ಮುತ್ತಿಟ್ಟು ಆಲಂಗಿಸಿದರು. ಮಗಳನ್ನು ನೋಡುತ್ತಿದ್ದಂತೆಪೋಷಕರಲ್ಲಿ ಕಣ್ಣೀರು ಧಾರೆಯಾಗಿ ಹರಿಯಿತು.
ಉಕ್ರೇನ್‍ನ ಎರಡನೇ ದೊಡ್ಡ ನಗರ ಹಾರ್ಕಿವ್‍ನಲ್ಲಿ ಪರಿಸ್ಥಿತಿ ಘನಘೋರವಾಗಿದೆ. ಯಾವುದೇ ಕ್ಷಣದಲ್ಲಿ ದಾಳಿಯಾಗುವ ಸಾಧ್ಯತೆ ಇರುವುದರಿಂದ ನಗರ ತೊರೆಯುವಂತೆ ಸ್ಥಳೀಯರು ತಿಳಿಸಿದ್ದರು. ಮೈನಸ್ 7 ಡಿಗ್ರಿಯಿದ್ದು, ಹಿಮಬೀಳುವ ವಾತಾವರಣದಲ್ಲಿ ಪೋಲೆಂಡ್ ಗಡಿತನಕ 17 ತಾಸು ನಿಂತುಕೊಂಡೇ ರೈಲಿನಲ್ಲಿ ಪ್ರಯಾಣಿಸಿದೆವು. ಅಲ್ಲಿಂದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಿದರು. ಅಲ್ಲಿನ ಪರಿಸ್ಥಿತಿ ನೆನೆದರೆ ನಮಗಿದು ಪುನರ್ಜನ್ಮ ಎಂದು ಭಾವುಕರಾದರು.
ನಮ್ಮನ್ನು ಕೆಲವು ದಿನಗಳ ಕಾಲ ಮೆಟ್ರೊ ಹಾಗೂ ಇನ್ನೂ ಕೆಲವು ದಿನ ವಿಶ್ವವಿದ್ಯಾಲಯದ ಬೇಸ್‍ಮೆಂಟ್‍ನಲ್ಲಿ ಇರಿಸಿದ್ದರು. ಸೈರನ್ ಶಬ್ದ ಕೇಳಿದರೆ ದಾಳಿಯಾಗುವ ಮುನ್ಸೂಚನೆ ಸಿಕ್ಕಂತೆ ಆಗುತ್ತಿತ್ತು. ಪ್ರತಿ ಬಾರಿ ಸೈರನ್ ಆದಾಗಲೂ ಜೀವ ಹೋಗಿ ಬರುತ್ತಿತ್ತು. ಆಹಾರ ಸಂಗ್ರಹಿಸಿಟ್ಟುಕೊಳ್ಳದ ಕಾರಣ ಹಸಿವಿನಿಂದ ಬಳಲಬೇಕಾಯಿತು. ಕುಡಿಯುವ ನೀರಿನ ಸಮಸ್ಯೆಯೂ ಬಾಸಿತು ಎಂದು ಅನುಭವ ಹಂಚಿಕೊಂಡರು.
ಯುದ್ಧಪೀಡಿತ ಪ್ರದೇಶವಾದರೂ ಕಡಿಮೆ ದೂರದ ಪ್ರಯಾಣಕ್ಕೂ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಯಿತು. ಮೂರು ಕಿ.ಮೀ. ದೂರದ ರೈಲು ನಿಲ್ದಾಣಕ್ಕೆ 3,000 ಪಾವತಿಸಿದೆವು. ಐದು ದಿನಗಳ ಮೊದಲು ಯುದ್ಧದ ಮುನ್ಸೂಚನೆ ಸಿಕ್ಕಾಗ ವಿಮಾನ ಪ್ರಯಾಣಕ್ಕೆ ಅವಕಾಶವಿತ್ತು. ಆದರೆ, ಆರಂಭಿಕ ದರವೇ 60 ಸಾವಿರ ನಿಗದಿಯಾಗಿತ್ತು ಎಂದರು.
ನವೀನ್ ಅಣ್ಣ ಕೂಡ ಇದ್ದಿದ್ದರೆ:
ರಷ್ಯಾ ದಾಳಿಗೆ ಮೃತಪಟ್ಟ ನಮ್ಮ ಜಿಲ್ಲೆಯ ನವೀನ್ ಅಣ್ಣ ವಿದ್ಯಾಭ್ಯಾಸದ ವಿಷಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದ. ಫೆ.28ರಂದು ಮಾತನಾಡಿ ಭಾರತಕ್ಕೆ ವಾಪಸ್ ಹೋಗುವ ಬಗ್ಗೆ ನಾಳೆ ತಿಳಿಸುವೆ ಎಂದಿದ್ದ. ಮರುದಿನವೇ ದಾಳಿಗೆ ಬಲಿಯಾಗಿದ್ದ ಎಂದು ಶಿವಾನಿ ಭಾವುಕರಾದರು.
ಈಗಾಗಲೇ ಬಹುತೇಕರು ಹಾರ್ಕಿವ್ ನಗರ ತೊರೆದಿದ್ದಾರೆ. ನಮ್ಮ ನವೀನ್ ಕೂಡ ಬಂದಿದ್ದರೆ ಅದಕ್ಕಿಂತ ಖುಷಿ ಮತ್ತೇನು ಇರುತ್ತಿರಲಿಲ್ಲ. ನಾವು ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಶ್ರೀನಿವಾಸ ಮಾನೆ ಸರ್ ನಮ್ಮ ಕುಟುಂಬದವರಿಗೆ ಬಹಳಷ್ಟು ಧೈರ್ಯ ತುಂಬಿದ್ದಾರೆ. ಅವರಿಗೆ ಸದಾ ಋಣಿ ಎಂದು ವಿದ್ಯಾರ್ಥಿನಿಯರು ಹೇಳಿದರು.
ಶಿಕ್ಷಣದ ಭವಿಷ್ಯ ನಿರ್ಧರಿಸಲು ಕೋರಿಕೆ:
ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚ ಬಹಳಷ್ಟು ಕಡಿಮೆ. ಆದ್ದರಿಂದ ಭಾರತದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿನ ರಾಷ್ಟ್ರೀಯ ವಿ.ವಿ.ಯಲ್ಲಿ ಓದುತ್ತಿದ್ದಾರೆ. ಈಗ ನಮ್ಮೆಲ್ಲರ ಶಿಕ್ಷಣ ಮೊಟಕುಗೊಂಡಿದೆ. ಇದಕ್ಕೆ ಭಾರತ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಶಿವಾನಿ
